

ಶರಣಯ್ಯ ಒಡೆಯರ್ ಮುದಗಲ್
ಪುರಸಭೆ ವ್ಯಾಪ್ತಿಯಲ್ಲಿನ ವಸತಿ ರಹಿತ ಬಡವರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಏಳು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.
ಪಟ್ಟಣದ ವೆಂಕಟರಾಯನಪೇಟೆ ಸಮೀಪ 2016-17ನೇ ಸಾಲಿನಲ್ಲಿ ಸ.ನಂ.476/1ರಲ್ಲಿ ಖರೀದಿಸಲಾಗಿರುವ 4 ಎಕರೆ ಭೂಮಿಯಲ್ಲಿ ತಮಗೆ ನಿವೇಶನ ಸಿಗಲಿದೆ ಎಂದು ನೂರಾರು ಬಡ ಕುಟುಂಬಗಳು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಅನೇಕ ಸಲ ಪುರಸಭೆಗೆ ಅಲೆದಾಡಿರುವ ಫಲಾನುಭವಿಗಳಿಗೆ ಅಧಿಕಾರಿಗಳ ಭರವಸೆ ಬಿಟ್ಟರೆ ಬೇರೆನೂ ದೊರೆತಿಲ್ಲ.
ವಸತಿ ಹಾಗೂ ನಿವೇಶನ ಇಲ್ಲದ ಬಡವರಿಗೆ ಸರ್ಕಾರದಿಂದ ನಿವೇಶನ ನೀಡಲು ಅರ್ಜಿ ಕರೆಯಲಾಗಿತ್ತು. ಅರ್ಜಿಗಳನ್ನು ಪರಿಶೀಲಿಸಿದ ಪುರಸಭೆ ಅಧಿಕಾರಿಗಳು, 161 ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಸಿದ್ಧಪಡಿಸಿದ್ದರು. ಇದಕ್ಕೆ ವಸತಿ ನಿಗಮದಿಂದ ಅನುಮೋದನೆ ಪಡೆಯಲಾಗಿದೆ.
ಈ ಬಗ್ಗೆ ಪುರಸಭೆ ಆಡಳಿತಾಧಿಕಾರಿಯಾಗಿದ್ದ ಅಂದಿನ ಲಿಂಗಸುಗೂರು ಎಸಿ ದಿವ್ಯಪ್ರಭು ಅಧ್ಯಕ್ಷತೆಯಲ್ಲಿ 2017ರ ಮೇ 5ರಂದು ನಡೆದ ಸಭೆಯಲ್ಲಿ ಪರಿಶಿಷ್ಟ ಜಾತಿಯ 27, ಪರಿಶಿಷ್ಟ ಪಂಗಡದ 7, ಸಾಮಾನ್ಯ 116, ಇತರ 11 ಒಟ್ಟು 161 ಫಲಾನುಭವಿಗಳ ಆಯ್ಕೆ ಅಂತಿಮಗೊಳಿಸಿ ಎಲ್ಲರಿಗೂ ಹಕ್ಕುಪತ್ರ ವಿತರಿಸಲು ನಿರ್ಣಯ ಕೈಗೊಳ್ಳಲಾಗಿತ್ತು.
ಆದರೆ, ಫಲಾನುಭವಿಗಳಿಗೆ ನಿವೇಶನ ನೀಡಲು ಉದ್ದೇಶಿಸಲಾಗಿದ್ದ ಪುರಸಭೆ ವ್ಯಾಪ್ತಿಯ 4 ಎಕರೆ ಭೂಮಿಯನ್ನು 2016ರಲ್ಲಿಯೇ ಭೂ ಪರಿವರ್ತನೆ ಮಾಡಿ ಜಿಲ್ಲಾ ನಗರ ಯೋಜನ ಪ್ರಾಧಿಕಾರದಿಂದ ನಕ್ಷೆ ತಯಾರಿಸಿ ಅನುಮೋದನೆ ಪಡೆಯಲಾಗಿದೆ. ಅಲ್ಲದೆ ಅಂದಿನ ಪುರಸಭೆ ಮುಖ್ಯಾಧಿಕಾರಿ ಹಾಜಿಬಾಬು, ರಾಜ್ಯ ವಸತಿ ನಿಗಮಕ್ಕೆ ವರದಿ ಸಲ್ಲಿಸಿ ಬಡವರಿಗೆ ನಿವೇಶನ ನೀಡಲು ಸಿದ್ಧತೆ ನಡೆಸಿದ್ದರು. ಕ್ಷೇತ್ರದ ಶಾಸಕರಾಗಿದ್ದ ಮಾನಪ್ಪ ವಜ್ಜಲ್ ಅವಧಿ ಮುಗಿದು ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ನಿವೇಶನ ಹಂಚಿಕೆ ಪ್ರಕ್ರಿಯೆ ನಿಲ್ಲಿಸಲಾಗಿತ್ತು.
2018ರ ವಿಧಾನಸಭೆ ಚುನಾವಣೆಯಲ್ಲಿ ಮಾನಪ್ಪ ವಜ್ಜಲ್ ಪರಾಭವಗೊಂಡು ಡಿ.ಎಸ್.ಹೂಲಗೇರಿ ಶಾಸಕರಾದರು. ಅಧಿಕಾರಿಗಳು ಮತ್ತು ಶಾಸಕರ ನಡುವೆ ಸಮನ್ವಯ ಕೊರತೆಯಿಂದಾಗಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಆಗಲಿಲ್ಲ. ಇದರಿಂದಾಗಿ ಆಯ್ಕೆಯಾಗಿರುವ 161 ಫಲಾನುಭವಿಗಳು ಏಳು ವರ್ಷಗಳಿಂದ ನಿವೇಶನಕ್ಕೆ ಕಾದು ಕುಳಿತುಕೊಳ್ಳುವಂತಾಗಿದೆ.ಮಾನಪ್ಪ ವಜ್ಜಲ್ ಅವರೇ ಮತ್ತೆ ಶಾಸಕರಾಗಿದ್ದು ಹಿಂದಿನ ಅವಧಿಯಲ್ಲಿ ನನೆಗುದಿಗೆ ಬಿದಿದ್ದ ನಿವೇಶನ ಹಂಚಿಕೆ ಯೋಜನೆಗೆ ಮರು ಚಾಲನೆ ನೀಡಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಒದಗಿಸುವರೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.
ಈ ಹಿಂದೆ ನಾನು ಶಾಸಕನಾಗಿದ್ದಾಗ ಮುದಗಲ್ ಪುರಸಭೆ ವ್ಯಾಪ್ತಿಯ ಬಡವರಿಗೆ ನಿವೇಶನ ಹಂಚಲು ವ್ಯವಸ್ಥೆ ಮಾಡಲಾಗಿತ್ತು. ನಂತರ ಶಾಸಕರಾದವರು ನಿವೇಶನ ವಿತರಿಸಿಲ್ಲ. ಈಗ ನಾನು ಮತ್ತೆ ಶಾಸಕನಾಗಿರುವುದರಿಂದ ಏಳು ವರ್ಷದಿಂದ ತಟಸ್ಥವಾಗಿದ್ದ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲಾಗುವುದು. ಬಡವರಿಗೆ ನಿವೇಶನ ಕಲ್ಪಿಸುವುದು ನನ್ನ ಕನಸು. ಇದಕ್ಕಾಗಿ ಫಲಾನುಭವಿಗಳು ಯಾರಿಗೂ ಹಣ ನೀಡುವ ಅಗತ್ಯ ಇಲ್ಲ.ಮಾನಪ್ಪ ವಜ್ಜಲ್,ಶಾಸಕ, ಲಿಂಗಸುಗೂರು ಪುರಸಭೆಯಿಂದ ನಿವೇಶನ ಕೊಡುತ್ತಾರೆ ಅಂತ ಆರೇಳು ವರ್ಷದಿಂದ ಕಾಯುತಿದ್ದೇವೆ. ಮೊದಲು ಕೆಲ ಸದಸ್ಯರು ತಾವೇ ಬಂದು ನಿಮಗೆ ನಿವೇಶನ ಕೊಡಿಸುತ್ತೆವೆಂದು ಒಂದಿಷ್ಟು ರೊಕ್ಕ ತಗೊಂಡಿದ್ದರು. ಆದರೆ ಇದುವರೆಗೂ ನಮಗೆ ನಿವೇಶನ ಕೊಟ್ಟಿಲ್ಲ.ಹೆಸರು ಹೇಳಲು ಇಚ್ಛಿಸದ ಫಲಾನುಭವಿ