

ಬೆಳಗಾವಿ: ಬೆಳಗ್ಗೆ 5 ಗಂಟೆಗೆ ದಿನಚರಿ ಆರಂಭ. ಸ್ಪೀಕರ್ನಲ್ಲಿ ತೇಲಿಬರುವ ಭಜನೆ, ಹಾಡು ಕೇಳುತ್ತಲೇ ಬೆಳಗಿನ ಕ್ರಿಯೆ ಪೂರ್ಣ. ನಂತರ ಅರ್ಧ ಗಂಟೆ ಯೋಗಾಭ್ಯಾಸ. ಇನ್ನರ್ಧ ತಾಸು ಧ್ಯಾನ- ಪ್ರಾರ್ಥನೆ. 6.30ಕ್ಕೆ ವಾಕಿಂಗ್ ಟ್ರ್ಯಾಕ್ನಲ್ಲಿ ವಿಹಾರ. ತದನಂತರ ಸ್ನಾನ, ಪೂಜೆ ಇತ್ಯಾದಿ. ಬರೋಬ್ಬರಿ 9ಕ್ಕೆ ಉಪಾಹಾರ. ಸಾವಯವ ಪದಾರ್ಥಗಳಿಂದ ತಯಾರಿಸಿದ ಶಾಖಾಹಾರಿ ಪೌಷ್ಟಿಕ ಆಹಾರ. ಶುದ್ಧ ದೇಸಿ ತುಪ್ಪ, ಕುಡಿಯಲು ದೇಸಿ ಆಕಳ ಹಾಲು, ಸೇವಿಸಲು ಹಣ್ಣು-ಹಂಪಲು ಬೇರೆ.
ಉಪಾಹಾರದ ನಂತರ ಒಂದಿಷ್ಟು ಹರಟೆ, ಉಭಯ ಕುಶಲೋಪರಿ, ಲೋಕಾರೂಢಿ ಮಾತುಕತೆ. ಗ್ರಂಥಾಲಯದಲ್ಲಿ ಆಧ್ಯಾತ್ಮಿಕ, ಧಾರ್ವಿುಕ ಗ್ರಂಥಗಳು, ದಿನಪತ್ರಿಕೆ, ನಿಯತಕಾಲಿಕೆ, ಪುಸ್ತಕಗಳ ಸಮೇತ ಫುಡ್ ಫಾರ್ ಥಾಟ್. ಮಧ್ಯಾಹ್ನ ಉತ್ತರ ಕರ್ನಾಟಕ ಶೈಲಿಯ ರುಚಿಕಟ್ಟಾದ ಊಟ. ಸಂಜೆ 4ರಿಂದ ದೇಸಿ ಆಟ. ಕೊಕ್ಕೊ, ಕಬಡ್ಡಿ, ವಾಲಿಬಾಲ್... ಇದಕ್ಕಾಗಿಯೇ ಸುವ್ಯವಸ್ಥಿತ ಮೈದಾನ. ಸಂಜೆ 6-7ರ ನಡುವೆ ರಾತ್ರಿ ಭೋಜನ. ಆಮೇಲೆ ಪ್ರಾರ್ಥನೆ. ರಾತ್ರಿ 8ರ ನಂತರ ಸವಿನಿದ್ರೆ. ಈ ನಡುವೆ ಏನಾದರೂ ತಿನ್ನಬೇಕೆನ್ನಿಸಿದರೆ ಬೆಳಗ್ಗೆಯಿಂದ ಸಂಜೆಯವರೆಗೂ ಅಡುಗೆಮನೆಗೆ ಸದಾ ಸ್ವಾಗತ. ಇಂತಹ ಸಮೃದ್ಧಿಯ- ಸಂತಸದ ಜೀವನ ಸೌಲಭ್ಯ, ಅದರಲ್ಲೂ ವೃದ್ಧಾಪ್ಯದಲ್ಲಿ ಪತಿ-ಪತ್ನಿ ಒಂದುಗೂಡಿ ದೊರೆತರೆ ಸ್ವರ್ಗಕ್ಕೆ ಕಿಚ್ಚುಹಚ್ಚಿದಂತೆಯೇ...
ಆದರೆ, ವಾಸ್ತವದಲ್ಲಿ ಇದೆಲ್ಲ ಸಾಧ್ಯವೇ? ಹೌದು! ಇದೆಲ್ಲ ವಾಸ್ತವದಲ್ಲಿ ಸಾಧ್ಯ. ಏಕೆಂದರೆ, ಇದು ಹ್ಯಾಪ್ಪಿ ಹೋಂ. ಅದರಲ್ಲೂ ಜಗಜಂಪಿ ಹ್ಯಾಪ್ಪಿ ಹೋಂ. ಇಂತಹ ಕನಸಿನ ಮನೆಯೊಂದು ಬೆಳಗಾವಿ ನಗರದ ಸಮೀಪದಲ್ಲೇ ನನಸಾಗುತ್ತಿದೆ. ವೃದ್ಧಾಪ್ಯದಲ್ಲಿ ಒಂಟಿಯಾಗಿರದೆ, ವಾನಪ್ರಸ್ಥಾಶ್ರಮದ ರೀತಿಯಲ್ಲಿ, ಅವಿಭಕ್ತ ಕುಟುಂಬದ ಮಾದರಿಯಲ್ಲಿ ಸುಖಿ- ಸಮೃದ್ಧಿ- ಸಂತಸ- ಆರೋಗ್ಯಕರ ಜೀವನ ಸಾಗಿಸಬೇಕೆನ್ನುವ ದಂಪತಿಗಳನ್ನು ಸ್ವಾಗತಿಸಲು ಸಜ್ಜಾಗುತ್ತಿದೆ ಈ ಜಗಜಂಪಿ ಹ್ಯಾಪ್ಪಿ ಹೋಂ.
ಆಧುನಿಕ ಜೀವನಶೈಲಿಯ ಪ್ರಭಾವದಿಂದಾಗಿ ಅವಿಭಕ್ತ ಕುಟುಂಬಗಳು ಈಗ ನೋಡುವುದಕ್ಕೂ ಸಿಗದಂತಾಗುತ್ತಿದೆ. ಇನ್ನು ಮಗಳು ಮದುವೆಯಾಗಿ ಗಂಡನ ಮೆನೆಗೆ ಹೋದರೆ, ಮಗ ಉದ್ಯೋಗ ನಿಮಿತ್ತ ಪರ ಊರಿಗೆ ಹೊರಟರೆ ತಂದೆ- ತಾಯಿಯನ್ನು ನೋಡಿಕೊಳ್ಳುವವರೇ ಇರುವುದಿಲ್ಲ. ಹಿರಿಯ ಜೀವಗಳು ಏಕಾಂಗಿ ಹೋರಾಟ ನಡೆಸುವ ಪ್ರಸಂಗಗಳೇ ಹೆಚ್ಚು. ಸಾಕಷ್ಟು ದುಡ್ಡು ಇದ್ದರೂ ತಮ್ಮ ಪಾಲಕರನ್ನು ಕುಟುಂಬದವರಂತೆ ನೋಡಿಕೊಳ್ಳುವವರು ಇಲ್ಲವಲ್ಲ ಎಂಬ ಕೊರಗು ಮಕ್ಕಳನ್ನೂ ಕಾಡುತ್ತದೆ. ಇಂತಹ ಸಂದರ್ಭದಲ್ಲಿ ಬಹಳಷ್ಟು ಜನರ ಮನದಲ್ಲಿ ಮೂಡಿಬರುವುದೇ ವೃದ್ಧಾಶ್ರಮ. ಆದರೆ, ವೃದ್ಧಾಶ್ರಮವನ್ನೂ ಮೀರಿದ ವಿನೂತನ ವಿಚಾರಧಾರೆಯೊಂದಿಗೆ ಒಟ್ಟುಕುಟುಂಬದಂತಿರುವ ವಾತಾವರಣವನ್ನು ಸೃಷ್ಟಿಸಲು ಮುಂದಾಗಿದ್ದಾರೆ ಬೆಳಗಾವಿಯ ಸುಪ್ರಸಿದ್ಧ ಉದ್ಯಮಿಯೊಬ್ಬರು.
ಆಧ್ಯಾತ್ಮಿಕ ಚಿಂತಕರು, ಸಾಮಾಜಿಕ ಕಳಕಳಿ ಉಳ್ಳವರೂ ಆಗಿರುವ ಬೆಳಗಾವಿಯ ಜಗಜಂಪಿ ಉದ್ಯೋಗ ಸಮೂಹದ ಮಲ್ಲಿಕಾರ್ಜುನ ಜಗಜಂಪಿ ಅವರೇ ಈ ವಿಶಿಷ್ಟ ಯೋಜನೆಯ ಸಾಕಾರಮೂರ್ತಿ. ವೇದ ಕಾಲದಲ್ಲಿ ಇದ್ದ ಆಶ್ರಮ ಪದ್ಧತಿಗಳ ಪೈಕಿ ವಾನಪ್ರಸ್ತಾಶ್ರಮವನ್ನು ಪತಿ- ಪತ್ನಿ ಇಬ್ಬರು ಸೇರಿ ಸುಂದರ, ಸುಮಧುರ, ಸಂತಸಕರ ವಾತಾವರಣದಲ್ಲಿ ಕಳೆಯಲು ಅವಕಾಶ ಕಲ್ಪಿಸುವ ಯೋಚನೆ, ಯೋಜನೆ ಇವರದು. ಈ ವಾನಪ್ರಸ್ತಾಶ್ರಮಕ್ಕೆ ಅರ್ಹರ ಆಯ್ಕೆಗೂ ಇವರು ವಿಶೇಷ ಮುತುವರ್ಜಿ ವಹಿಸುತ್ತಿದ್ದಾರೆ.
ಪಾವತಿಸಬೇಕು 15.55 ಲಕ್ಷ ರೂಪಾಯಿ: ‘ಜಗಜಂಪಿ ಹ್ಯಾಪಿ ಹೋಂ’ ಎಂಬ ಮನೆಯಲ್ಲಿ 50 ವರ್ಷ ಮೇಲ್ಪಟ್ಟ 65 ವರ್ಷ ಒಳಗಿನ ದಂಪತಿ ಇರಲು ಅವಕಾಶವಿದೆ. ಇದಕ್ಕಾಗಿ ಟ್ರಸ್ಟ್ ಮಾಡಲಾಗುತ್ತಿದ್ದು, ಈ ಟ್ರಸ್ಟಿಗೆ 15.55 ಲಕ್ಷ ರೂಪಾಯಿಗಳನ್ನು ಒಂದು ಸಲ ಕೊಟ್ಟರೆ ಸಾಕು ದಂಪತಿಗಳಿಬ್ಬರೂ ಜೀವನಪೂರ್ತಿ ಈ ಮನೆಯಲ್ಲಿ ಇರಬಹುದು.
ಈ ಯೋಜನೆ ಜಾರಿಗೊಳಿಸಲು ಬೆಳಗಾವಿಯಿಂದ 10 ಕಿ.ಮೀ. ದೂರದಲ್ಲಿ ಐದು ಎಕರೆ ಜಾಗ ಗುರುತಿಸ ಲಾಗಿದೆ. ಈಗಾಗಲೇ ಕಂಪೌಂಡ್ ನಿರ್ವಿುಸಲಾಗಿದೆ. ಸುತ್ತಲೂ ವಾಕಿಂಗ್ ಟ್ರಾ್ಯಕ್ ನಿರ್ವಣವಾಗುತ್ತಿದೆ. ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಎರಡು ಈಜುಗೊಳ, ಯೋಗ ಹಾಲ್, ಧ್ಯಾನ ಮಂದಿರ. ಗಣೇಶ ಮಂದಿರ ಮುಂತಾದ ವ್ಯವಸ್ಥೆ ಮಾಡಲಾಗುತ್ತದೆ.
155 ದಂಪತಿಗಳು ಅಂದರೆ ಒಟ್ಟು 310 ಜನರು ವಾಸಿಸಬಹುದಾದಂತಹ ಅಪಾರ್ಟಮೆಂಟ್ ಮಾದರಿಯ ಕಟ್ಟಡ ನಿರ್ವಿುಸಲಾಗುತ್ತದೆ. ಪ್ರತಿಯೊಬ್ಬ ದಂಪತಿಗೆ ಸುಮಾರು 800 ಚದರ ಅಡಿ ಸುಸಜ್ಜಿತ ಫರ್ನಿಚರ್ ಸಮೇತ ಮನೆ ನೀಡಲಾಗುತ್ತದೆ. ಇವರೆಲ್ಲರ ಸೇವೆಗಾಗಿ 40 ಸಿಬ್ಬಂದಿ ಇರುತ್ತಾರೆ. ಎಲ್ಲರಿಗೂ ಒಂದೇ ಕಡೆ ಅಡುಗೆ ತಯಾರಿ, ಒಂದೇ ಕಡೆ ಊಟದ ವ್ಯವಸ್ಥೆ ಇರುತ್ತದೆ. ಇಷ್ಟು ಜನರು ಒಂದೆಡೆ ಇರುವುದರಿಂದ ಇಲ್ಲಿ ಅವಿಭಕ್ತ ಕುಟುಂಬದ ವಾತಾವರಣ ತಾನಾಗಿಯೇ ನಿರ್ವಣವಾಗುತ್ತದೆ. ಹಾಗಾಗಿ, ದಂಪತಿಗಳಿಬ್ಬರೂ ನಿಶ್ಚಿಂತೆಯಿಂದ ಇಲ್ಲಿ ಕಾಲ ಕಳೆಯಬಹುದು ಎಂದು ಭವಿಷ್ಯದ ಹ್ಯಾಪ್ಪಿ ಹೋಮ್ ಚಿತ್ರಣ ನೀಡುತ್ತಾರೆ ಮಲ್ಲಿಕಾರ್ಜುನ ಜಗಜಂಪಿ ಅವರು. ದಂಪತಿ ಇಲ್ಲಿ ಖಾಸಗಿ ಜೀವನ ನಡೆಸುತ್ತಲೇ ಉಳಿದ ಸಂದರ್ಭದಲ್ಲಿ ಹ್ಯಾಪ್ಪಿ ಹೋಂನ ಇತರ ಸದಸ್ಯರೊಂದಿಗೆ ಬೆರೆಯಬಹುದು.
ಯಾರಿಂದಲೂ ಪಡೆಯುವುದಿಲ್ಲ ದಾನ: ಜಗಜಂಪಿ ಹ್ಯಾಪ್ಪಿ ಹೋಂ ಟ್ರಸ್ಟ್ ಮಾಡಿದ್ದೇನೆ. ಇದು ನನ್ನ ವೈಯಕ್ತಿಕ ನಿರ್ಣಯ. ನಾನೊಬ್ಬನೇ ಟ್ರಸ್ಟಿ. ಯಾರಿಂದಲೂ ದಾನ ಪಡೆಯುವುದಿಲ್ಲ. ವಾಸ ಮಾಡಲು ಒಪ್ಪಿಗೆ ಆದವರಿಂದ ಮಾತ್ರ ದುಡ್ಡು ಪಡೆಯಲಾಗುತ್ತದೆ. ಜಗಜಂಪಿ ಹೆಸರು ಉತ್ತರ ಕರ್ನಾಟಕ ಭಾಗದ ಉದ್ಯಮ ಕ್ಷೇತ್ರದಲ್ಲಿ ಚಿರಪರಿಚಿತ. ಜನರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ. ಒಂದು ಕಡೆ ತಾಯಿಯ ಆಶಯ, ಇನ್ನೊಂದೆಡೆ ಗುರುವಿನ ಸನ್ಮಾರ್ಗದಲ್ಲಿ ಮುನ್ನಡೆಯುತ್ತಿರುವೆ. ಗಳಿಸಿದ ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಕೆ ಮಾಡುತ್ತಿರುವೆ ಎಂದು ವಿನಮ್ರವಾಗಿ ಹೇಳುತ್ತಾರೆ ಮಲ್ಲಿಕಾರ್ಜುನ ಜಗಜಂಪಿ ಅವರು.
2024ರ ಲೋಕಸಭೆಗೆ ಜಗಜಂಪಿ: ರೈತರು, ಬಡವರು ಶ್ರೀಮಂತರಾಗಬೇಕು. ಆಗ ನಿಜವಾಗಿ ಭಾರತವು ಶ್ರೀಮಂತವಾಗುತ್ತದೆ. ರೈತರು ಮತ್ತು ಕೃಷಿ ಆದಾಯದ ಮೇಲೆ ಶೇಕಡ 70ರಷ್ಟು ಭಾರತೀಯರು ಅವಲಂಬನವಾಗಿದ್ದಾರೆ. ಹೀಗಿರುವ ದೇಶದ ಆರ್ಥಿಕತೆ ಸುಧಾರಣೆಯಾಗಬೇಕು. ರೈತರು ಹಾಗೂ ಬಡವರಿಗಾಗಿ ಕೆಲವು ಯೋಜನೆಗಳು ಕಾರ್ಯಗತವಾಗಬೇಕೆಂದು ಚಿಂತನೆ ನಡೆಸಿರುವ ಮಲ್ಲಿಕಾರ್ಜುನ ಜಗಜಂಪಿ ಅವರು 2024ರ ಲೋಕಸಭೆಗೆ ಬೆಳಗಾವಿಯಿಂದ ಪ್ರತಿನಿಧಿತ್ವ ಬಯಸುತ್ತಿದ್ದಾರೆ.
ಡಿಡಿ ಕಳಿಸುವ ವಿಳಾಸ: ಸಾಗರ್ ಕೋ-ಆಪ್ ಕ್ರೆಡಿಟ್ ಸೊಸೈಟಿ, 244/54 ಫುಲಬಾಗ ಗಲ್ಲಿ ಬೆಳಗಾವಿ - ಈ ವಿಳಾಸಕ್ಕೆ ಮಲ್ಲಿಕಾರ್ಜುನ ವಿ. ಜಗಜಂಪಿ ಇವರ ಹೆಸರಿನಲ್ಲಿ ಡಿಸೆಂಬರ್ 31ರೊಳಗೆ 1555 ರೂ. ಡಿಡಿ ಕಳಿಸಬೇಕು. ವಾಟ್ಸ್ಆ್ಯಪ್ ಸಂಖ್ಯೆ 7829841555ಗೆ ತಮ್ಮ ಪೂರ್ಣ ವಿವರ ಕಳಿಸಬೇಕು. ನಂತರದಲ್ಲಿ ಅವರಿಗೆ ಯೋಜನೆಯ ಪೂರ್ಣ ಮಾಹಿತಿ ವಾಟ್ಸ್ಆ್ಯಪ್ ಮುಖಾಂತರ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ.