

ಕೊಟ್ಟೂರು: ಶೈಕ್ಷಣಿಕ ಕೇಂದ್ರ, ರ‌್ಯಾಂಕ್‌ಗಳ ತವರೂರು ಕೊಟ್ಟೂರಿಗೆ ದಶಕಗಳೇ ಕಳೆದರೂ ಸರ್ಕಾರಿ ಪದವಿ ಕಾಲೇಜು ಮಂಜೂರಾಗಿಲ್ಲ. ಇದರಿಂದ ಗ್ರಾಮೀಣ ಭಾಗದ ಪಿಯು ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕೆ ಬೇರೆ ಊರಿನ ಪ್ರಥಮ ದರ್ಜೆ ಕಾಲೇಜುಗಳನ್ನೇ ಅವಲಂಬಿಸಬೇಕಿದೆ.
ಕೊಟ್ಟೂರು ಈ ಹಿಂದೆ ಕೂಡ್ಲಿಗಿ ತಾಲೂಕು ವ್ಯಾಪ್ತಿಗೆ ಸೇರಿತ್ತು. ಆಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಪಪೂ ಮತ್ತು ಪದವಿ ಕಾಲೇಜ್ ತೆರೆಯಲು ನಂಜುಂಡಪ್ಪ ವರದಿ ಶಿಫಾರಸು ಮಾಡಿತ್ತು. ದಶಕಕ್ಕೂ ಹೆಚ್ಚು ಕಾಲ ಶಿಕ್ಷಣ ಪ್ರೇಮಿಗಳು ಹಾಗೂ ಸಮಾಜ ಸೇವಕರ ಹೋರಾಟದ ಫಲವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅಡೆತಡೆಗಳ ನಡುವೆಯೂ 2007ರಲ್ಲಿ ಸರ್ಕಾರಿ ಪಪೂ ಕಾಲೇಜು ಆರಂಭವಾಯಿತು. ಅದಾಗಿ ಎರಡು ವರ್ಷಗಳ ನಂತರ 2009ರಲ್ಲಿ ಕಲಬುರಗಿ ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಆದೇಶದಂತೆ ಕೊಟ್ಟೂರಿನಲ್ಲಿ ಡಿಗ್ರಿ ಕಾಲೇಜು ಆರಂಭಿಸಲು ಪ್ರಾಚಾರ್ಯ ನಾರಾಯಣಪ್ಪ ನೇತೃತ್ವದ ಮೂವರ ಸದಸ್ಯರ ಸಮಿತಿ ಇಲ್ಲಿಗೆ ಆಗಮಿಸಿ ಪೂರಕ ವಾತಾವರಣ ಮತ್ತು ಸೌಲಭ್ಯದ ವರದಿ ಸಂಗ್ರಹಿಸಿ ಶಿಕ್ಷಣ ಇಲಾಖೆಗೆ ಸಲ್ಲಿಸಿತ್ತು. ಆದರೆ, ಮತ್ತೊಂದು ದಶಕದ ಬಳಿಕ 2022ರಲ್ಲಿ ಅದೇ ಪ್ರಾದೇಶಿಕ ಆಯುಕ್ತರು, ಪ್ರಾಚಾರ್ಯೆ ಶ್ರೀದೇವಿ ನೇತೃತ್ವದ ಮೂವರ ಸಮಿತಿಯನ್ನು ನೇಮಿಸಿ ಕೊಟ್ಟೂರಿಗೆ ಕಳಿಸಿತು.
ಈ ತಂಡ ಸರ್ಕಾರಿ ಪದವಿ ಕಾಲೇಜ್ ಆರಂಭಕ್ಕೆ ಕೊಟ್ಟೂರು ತಾಲೂಕಿನಲ್ಲಿ 10 ಖಾಸಗಿ ಮತ್ತು ಎರಡು ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗಳಿವೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಕೊಠಡಿಗಳ ಸಮಸ್ಯೆ ಇಲ್ಲ. ಸರ್ಕಾರಿ ಪದವಿ ಕಾಲೇಜ್ ಆರಂಭಕ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಆಯುಕ್ತರಿಗೆ ವರದಿ ಸಲ್ಲಿಸಿತ್ತು. ನೋಡಲ್ ಅಧಿಕಾರಿ ನೇಮಕ ಕುರಿತು ತಂಡ ಮಾಹಿತಿ ನೀಡಿತ್ತು. ಆದರೆ, ಅದು ಸಹ ಕಡತದಲ್ಲೇ ಉಳಿದಿದೆ. ಕೊಟ್ಟೂರಿನಲ್ಲಿ ಡಿಗ್ರಿ ಕಾಲೇಜ್ ಆರಂಭಿಸುವಂತೆ ಅಂದಿನ ಕಾಂಗ್ರೆಸ್ ಶಾಸಕರು ವಿಧಾನ ಸಭೆಯಲ್ಲಿಯೂ ಒತ್ತಾಯಿಸಿದ್ದರೂ ಪ್ರಯೋಜನವಾಗಲಿಲ್ಲ. ಈಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು ದಶಕಗಳ ಕನಸು ಈಡೇರುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಕೊಟ್ಟೂರಿನಲ್ಲಿ 1970ರಲ್ಲಿಯೇ ಖಾಸಗಿ ಶಿಕ್ಷಣ ಸಂಸ್ಥೆ ಪದವಿ ಕಾಲೇಜ್ ಆರಂಭಿಸಿದೆ. ನಂತರ ಎರಡು ಖಾಸಗಿ ಸಂಸ್ಥೆಗಳು ಡಿಗ್ರಿ ಕಾಲೇಜುಗಳನ್ನು ತೆರೆದವು. ಕೊಟ್ಟೂರು ಹಾಗೂ ತಾಲೂಕಿನ ವಿವಿಧ ಪಿಯು ಕಾಲೇಜಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಸರ್ಕಾರಿ ಡಿಗ್ರಿ ಕಾಲೇಜ್‌ನಲ್ಲಿ ಓದಬೇಕಾದರೆ ಹರಪನಹಳ್ಳಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿಗೆ ಹೋಗುವುದು ಅನಿವಾರ್ಯವಾಗಿದೆ. ಇಲ್ಲಿ ಡಿಗ್ರಿ ಕಾಲೇಜ್ ಆರಂಭಕ್ಕೆ ಶಿಫಾರಸು ಮಾಡಿದಾಗಲೊಮ್ಮೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಭಾವಬೀರಿ ತಡೆಹಿಡಿಯುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಒಟ್ಟಾರೆ ಕೊಟ್ಟೂರು ಪಾಲಿಗೆ ಡಿಗ್ರಿ ಕಾಲೇಜು ಮರೀಚಿಕೆಯಾಗಿದೆ.
ಕೊಟ್ಟೂರು ಸ್ವಾತಂತ್ರ್ಯ ಪೂರ್ವದಿಂದಲೂ ಶಿಕ್ಷಣಕ್ಕೆ ಮಹತ್ವ ಕೊಟ್ಟ ಊರು. ಪಿಯುಸಿ ಕಲಾ ವಿಭಾಗದಲ್ಲಿ ರ‌್ಯಾಂಕ್‌ಗಳನ್ನು ಪಡೆಯುವ ಮೂಲಕ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿಯೂ ಹೆಗ್ಗುರುತು ಮೂಡಿಸಿದೆ. ಆದರೆ, ಸರ್ಕಾರಿ ಪದವಿ ಕಾಲೇಜು ಇಲ್ಲದಿರುವುದು ನಿಜಕ್ಕೂ ಶೋಚನೀಯ. ಡಿಗ್ರಿ ಕಾಲೇಜ್ ಇದ್ದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಖಾಸಗಿ ಕಾಲೇಜುಗಳಿಗೆ ಡೊನೇಷನ್ ಕಟ್ಟುವುದು ತಪ್ಪುತ್ತದೆ. ಸ್ವಲ್ಪ ಹಣದಲ್ಲಿಯೇ ಪದವಿ ಶಿಕ್ಷಣ ಮುಗಿಸಬಹುದು.ಕುಂ.ವೀರಭದ್ರಪ್ಪ,ಸಾಹಿತಿ, ಕೊಟ್ಟೂರು ಕೊಟ್ಟೂರಿನಲ್ಲಿ ಪದವಿ ಕಾಲೇಜ್ ಆರಂಭಿಸಲು ಸರ್ಕಾರಿ ಬಾಲಕರ ಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಅಗತ್ಯ ಕೊಠಡಿಗಳಿವೆ. ವಿದ್ಯಾರ್ಥಿಗಳಿಗೂ ಕೊರತೆ ಇಲ್ಲ. ಎರಡು ಸಲ ಮೂವರ ಸಮಿತಿ ಡಿಗ್ರಿ ಕಾಲೇಜ್ ಆರಂಭಿಸಲು ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ. ಆದರೆ, ಯಾವ ಕಾರಣಕ್ಕೆ ಸರ್ಕಾರಿ ಪದವಿ ಕಾಲೇಜು ಮುಂಜೂರಾಗಿಲ್ಲ ಎಂಬುದು ಗೊತ್ತಿಲ್ಲ.ಜಿ.ಸೋಮಶೇಖರ್,ಪ್ರಾಚಾರ್ಯ, ಸರ್ಕಾರಿ ಪಪೂ ಕಾಲೇಜ್, ಕೊಟ್ಟೂರು ಕೊಟ್ಟೂರಿನಲ್ಲಿ ಪದವಿ ಕಾಲೇಜ್ ಆರಂಭಿಸಲು ಅಗತ್ಯ ಸೌಲಭ್ಯಗಳಿವೆ. ನನ್ನ ನೇತೃತ್ವದ ಸಮಿತಿ ನೋಡಲ್ ಅಧಿಕಾರಿಯನ್ನು ಸಹ ನೇಮಕ ಮಾಡಿ, ಶಿಕ್ಷಣ ಆಯುಕ್ತರಿಗೆ ವರದಿ ಸಲ್ಲಿಸಲಾಗಿತ್ತು. ಆದರೆ, ಆಯುಕ್ತರು ಆದೇಶಿಸುತ್ತಾರೆ ಅಷ್ಟೇ, ಮುಂದಿನ ನಿರ್ಧಾರ ಸರ್ಕಾರದ್ದಾಗಿರುತ್ತದೆ.ಶ್ರೀದೇವಿ,2022ರಲ್ಲಿ ಪರಿಶೀಲನೆಗೆ ಬಂದಿದ್ದ ಸಮಿತಿಯ ಮುಖ್ಯಸ್ಥೆ