More

    ಪದವಿ ಕಾಲೇಜು ಸ್ಥಾಪನೆಗೆ ಸ್ಥಳ ಪರಿಶೀಲನೆ: ಹನುಮಸಾಗರದ ಎರಡು ಕಡೆ ಪರಿಶೀಲಿಸಿದ ಅಧಿಕಾರಿಗಳ ತಂಡ

    ಹನುಮಸಾಗರ: ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜು ಸ್ಥಾಪನೆಗೆ ಸಂಬಂಧಿಸಿ ಕೊಪ್ಪಳ ಪದವಿ ಕಾಲೇಜಿನ ಪ್ರಾಚಾರ್ಯ ಮಾರುತೇಶ ಬಿ. ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.

    ವ್ಯಾವಹಾರಿಕ, ಶೈಕ್ಷಣಿಕವಾಗಿ ಹನುಮಸಾಗರ ಪಟ್ಟಣ 50ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಕೇಂದ್ರ ಸ್ಥಾನವಾಗಿದೆ. ಈ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಇಳಕಲ್, ಗಜೇಂದ್ರಗಡ, ಬಾಗಲಕೋಟೆ, ಕುಷ್ಟಗಿ ಪಟ್ಟಣ ಸೇರಿ ವಿವಿಧಡೆ ಹೋಗುತ್ತಾರೆ. ಇಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭ ಮಾಡಿದರೆ ಅನುಕೂಲವಾಗಲಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಅದಕ್ಕೆ ಬೇಕಾದ ಸಹಕಾರ, ಸೌಲಭ್ಯ ನೀಡಲು ಸಿದ್ಧ ಎಂದು ಅಧಿಕಾರಿಗಳಿಗೆ ಸ್ಥಳೀಯ ಮುಖಂಡರು, ಗ್ರಾಪಂ ಸದಸ್ಯರು ಮನವಿ ಮಾಡಿದರು.

    ಎರಡು ಕಡೆ ಸ್ಥಳ ಪರಿಶೀಲನೆ: ಹನುಸಾಗರದ ಗುಡೂರು ರಸ್ತೆ ಹಾಳಕೇರಿ ಅನ್ನದಾನೇಶ್ವರ ಮಠದ ಜಮೀನು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣವನ್ನು ತಂಡ ಪರಿಶೀಲನೆ ನಡೆಸಿತು. ಕಾಲೇಜು ನಿರ್ಮಾಣಕ್ಕೆ ಮಠದ ಜಾಗ ನೀಡಲು ಶ್ರೀಗಳೊಂದಿಗೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ ಪಕ್ಕದಲ್ಲಿರುವ ಗಾಂವಠಾಣ ಸ್ಥಳ ನೀಡುವ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮೇಲಾಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು ಎಂದು ಪಿಡಿಒ ನಿಂಗಪ್ಪ ಮೂಲಿಮನಿ, ಮುಖಂಡರು ತಿಳಿಸಿದರು.

    ತಂಡದ ಮುಖ್ಯಸ್ಥ ಕೊಪ್ಪಳ ಪದವಿ ಕಾಲೇಜಿನ ಪ್ರಾಚಾರ್ಯ ಮಾರುತೇಶ ಬಿ., ಹಿರಿಯ ಉಪನ್ಯಾಸಕ ತಿಮ್ಮಾರೆಡ್ಡಿ ಮೇಟಿ ಹಾಗೂ ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಹೂಲ್ಲೂರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

    ಹನುಮಸಾಗರದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸುವುದು ಅವಶ್ಯಕವಾಗಿದ್ದು, ಬೇಕಾದ ಸೌಲಭ್ಯಗಳು ಸಹ ಲಭ್ಯ ಇವೆ. ಕಾಲೇಜು ಸ್ಥಾಪನೆ ಅನಿವಾರ್ಯತೆ ಹಾಗೂ ಸೌಲಭ್ಯಗಳ ಬಗ್ಗೆ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು. ಇಲ್ಲಿ ಪದವಿ ಕಾಲೇಜು ಆರಂಭಕ್ಕೆ ಸರ್ಕಾರದ ಗಮನ ಸೆಳೆಯಲು ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಆಸಕ್ತಿ ತೋರಬೇಕು.
    | ಮಾರುತೇಶ ಬಿ., ಸ್ಥಳ ಪರಿಶೀಲನೆಗೆ ಬಂದ ತಂಡದ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts