ರೈತರ ಹಿತಕ್ಕಾಗಿ ಮೊಸಳೆ ಕಣ್ಣೀರು ಬೇಡ

FotoJet (3)
Published on

ಡಾ. ಸ್ವಾಮಿನಾಥನ್ ವರದಿ ಜಾರಿ ಮಾಡಿ ಸರ್ಕಾರಕ್ಕೆ ಭಕ್ತರಹಳ್ಳಿ ಬೈರಗೌಡ ಆಗ್ರಹ

ಶಿಡ್ಲಘಟ್ಟ: ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕೆಂಬ ಡಾ.ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಸಾಕು. ಅದು ಬಿಟ್ಟು ರೈತರ ಬಗ್ಗೆ ಕೇವಲ ಮೊಸಳೆ ಕಣ್ಣೀರು ಸುರಿಸುವುದು ಬೇಡ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.

ಕೃಷಿ ಇಲಾಖೆಯಿಂದ ನಗರದ ಸ್ತ್ರೀಶಕ್ತಿ ಭವನದಲ್ಲಿ ರೈತ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತ ಈ ದೇಶದ ಬೆನ್ನೆಲಬು ಎಂಬ ಮಾತುಗಳು ಕೇವಲ ಘೋಷಣೆಗೆ ಸೀಮಿತವಾಗಿವೆ. ರೈತರು ಹಾಗೂ ಕೃಷಿ ಉಳಿವಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರ ಚಿಂತನೆ ಮಾಡುತ್ತಿಲ್ಲ. ಪೂರಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿ ಸಹಾಯಕ ನಿರ್ದೇಶಕ ಪಿ.ರವಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ, ರೇಷ್ಮೆಗೂಡು ಮಾರುಕಟ್ಟೆ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ಅವರು ತಮ್ಮ ಇಲಾಖೆಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಹಾಗೂ ಯೋಜನೆಗಳ ಬಗ್ಗೆ ವಿವರಿಸಿದರು.

ಕೃಷಿಕ ಸಮಾಜದ ನಿರ್ದೇಶಕರಾದ ಮಳ್ಳೂರು ಶಿವಣ್ಣ, ಮುತ್ತೂರು ಕೆಂಪೇಗೌಡ, ನಾಗಮಂಗಲ ಶ್ರೀನಿವಾಸ್‌ಗೌಡ, ವೆಂಕಟೇಶಪ್ಪ, ಪಾಪಣ್ಣ, ರೈತ ಮುಖಂಡರಾದ ತಿಮ್ಮನಾಯಕನಹಳ್ಳಿ ಅರುಣ್ ಕುಮಾರ್, ತಾದೂರು ಮಂಜುನಾಥ್, ಶೆಟ್ಟಹಳ್ಳಿ ರವಿಪ್ರಕಾಶ್, ಮುನಿಕೆಂಪಣ್ಣ, ಪ್ರತೀಶ್ ಹಾಜರಿದ್ದರು.

ಕುಸಿಯುತ್ತಿದೆ ಕೃಷಿ ಭೂಮಿ ಪ್ರಮಾಣ

ಕೃಷಿಯಿಂದ ವಿಮುಕ್ತರಾಗುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ದಿನೇದಿನೆ ಕೃಷಿಭೂಮಿ ಪ್ರಮಾಣವೂ ಕುಸಿಯುತ್ತಿದೆ. ಕೃಷಿ ಭೂಮಿ ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಆಗುತ್ತಿರುವ ಪ್ರಮಾಣದ ಅಂಕಿಸಂಖ್ಯೆಗಳು ಇದನ್ನು ಸಾಬೀತು ಮಾಡುತ್ತಿವೆ ಎಂದು ಭಕ್ತರಹಳ್ಳಿ ಬೈರೇಗೌಡ ಆತಂಕ ವ್ಯಕ್ತಪಡಿಸಿದರು.

ವೈಜ್ಞಾನಿಕ ಬೆಲೆ ನೀಡಿ

ರೈತ ಮತ್ತು ಕೃಷಿ ಉಳಿಯಲು ಭೂಮಿ, ನೀರು, ಉತ್ತಮ ಬಿತ್ತನೆ ಬೀಜ, ರಸಗೊಬ್ಬರ ಕೊಟ್ಟು ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ವೈಜ್ಞಾನಿಕ ಬೆಲೆ ನೀಡುವ ಕೆಲಸ ಸರ್ಕಾರ ಮಾಡಬೇಕಿದೆ. ಸ್ಥಳೀಯವಾಗಿ ಡಿಎಪಿ ಗೊಬ್ಬರ ಕೊರತೆ ಬಗ್ಗೆ ಸಭೆಗಳಲ್ಲಿ ಪ್ರಸ್ತಾಪಿಸಿದ್ದರೂ ಅಧಿಕಾರಿಗಳು ತಲೆಕಡಿಸಿಕೊಂಡಿಲ್ಲ. ಅಧಿಕಾರಿಗಳ ಕಾರ್ಯವೈಖರಿ ಮೇಲೆ ನಿಗಾ ಇಡಬೇಕಾದ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಭಕ್ತರಹಳ್ಳಿ ಬೈರೇಗೌಡ ಬೇಸರ ವ್ಯಕ್ತಪಡಿಸಿದರು. ಸೂಕ್ತ ಬಿತ್ತನೆ ಬೀಜ, ರಸಗೊಬ್ಬರ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಎಲ್ಲ ಮುಗಿದ ಮೇಲೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಕೆಲಸ ಮುಂದುವರಿಸಬಾರದು. ಶೀಘ್ರವಾಗಿ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net