

ಚನ್ನರಾಯಪಟ್ಟಣ: ಮಧುಮೆಹ, ಬಿಪಿ, ಸಂಧಿವಾತ, ನರಗಳ ಸೆಳೆತ ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಫುಟ್ ಥೆರಪಿ ಪ್ರಯೋಜನಕಾರಿ ಎಂದು ಮಂಗಳೂರಿನ ಖ್ಯಾತ ವೈದ್ಯ ಡಾ.ರತ್ನಾಕರ ಶೆಟ್ಟಿ ಹೇಳಿದರು.
ಪಟ್ಟಣದ ಹೇಮಾವತಿ ಸಭಾಂಗಣದಲ್ಲಿ ರೋಟರಿ ಕ್ಲಬ್ ಹಾಗೂ ಕಂಪಾನಿಯೋ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಫುಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ ಆರೋಗ್ಯ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಸ್ಪಾಂಡಲೈಟೀಸ್, ನಿದ್ರಾಹೀನತೆ, ಥೈರಾಯ್ಡ, ಲಕ್ವಾ, ಬೆನ್ನು ನೋವು ಮುಂತಾದ ಸುದೀರ್ಘ ನೋವುಗಳಿಗೆ ಫುಟ್ ಥೆರಪಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಈ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿದೆ. ಕೇವಲ 15 ದಿನಗಳ ಚಿಕಿತ್ಸೆ ಪಡೆದೆ ರೋಗಿ ಸುಧಾರಣೆ ಕಾಣಬಹುದು ಎಂದರು.
ಅರ್ಧ ತಾಸು ಚಿಕಿತ್ಸೆ ಪಡೆದರೆ 5 ಕಿ.ಮೀ.ವರೆಗೆ ವಾಕಿಂಗ್ ಮಾಡಿದಷ್ಟು ರಕ್ತ ಸಂಚಾರ ಮಾಡಲು ಈ ಚಿಕಿತ್ಸೆ ಸಹಕಾರಿಯಾಗುತ್ತದೆ. ನರ ರೋಗಗಳಿಗೆ ಸಂಬಂಧಿಸಿದಂತೆ ಸಣ್ಣ ಮತ್ತು ದೀರ್ಘಕಾಲಿಕ ಸಮಸ್ಯೆಗಳನ್ನು ಔಷಧರಹಿತವಾಗಿ ಹಾಗೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಪರಿಹರಿಸಬಹುದು. ಪ್ರತಿಯೊಬ್ಬರೂ ಉಚಿತವಾಗಿ ಚಿಕಿತ್ಸೆ ಪಡೆಯಬೇಕು ಎಂಬುದು ಸಂಸ್ಥೆಯ ಮುಖ್ಯ ಉದ್ದೇಶ ಎಂದರು.
ಇತರರ ಒಳಿತಿಗಾಗಿ ಬದುಕುವುದೇ ಜೀವನ ಕಲೆ. ಇದನ್ನು ರೋಟರಿ ಕ್ಲಬ್ ಸದಸ್ಯರು ಸಮರ್ಪಕವಾಗಿ ಅಳವಡಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಸಮಾಜದಲ್ಲಿರುವ ಬಡವರು, ದೀನದಲಿತರ ಶ್ರೇಯೋಭಿವೃದ್ಧಿಗಾಗಿ ಗುಣಮಟ್ಟದ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ನೀಡುವಲ್ಲಿ ರೋಟರಿ ಮುಂದಿದೆ. ನಿರ್ದಿಷ್ಟ ಯೋಜನೆಗಳನ್ನು ರೂಪಿಸಿ ಜನರಿಗೆ ಸೇವೆಗಳನ್ನು ತಲುಪಿಸುತ್ತಿರುವ ರೋಟರಿ ನಡೆಯನ್ನು ಸರ್ಕಾರವೂ ಅನುಸರಿಸಬೇಕಿದೆ ರೋಟರಿ ಕ್ಲಬ್ ಆಯೋಜಿಸಿದ ಉಚಿತ ಫುಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರದಲ್ಲಿ ಇದುವರೆಗೂ 2500 ಜನ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದರು.
ರೋಟರಿ ಕ್ಲಬ್ ಚನ್ನರಾಯಪಟ್ಟಣ ವಿಷನ್ ಅಧ್ಯಕ್ಷ ಬಿ.ವಿ.ವಿಜಯ್‌ಕುಮಾರ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ರೋಟರಿ ಕ್ಲಬ್ ಸಮಾಜಮುಖಿ ಕಾರ್ಯದಲ್ಲಿ ನಿರಂತರವಾಗಿ ತೊಡಗುತ್ತಿದೆ. ಇಲ್ಲಿ ಸೇವೆ ಮಾಡುವುದು ಮುಖ್ಯವಾಗಿದೆ. ಸಮಾಜ ಸೇವೆಯನ್ನೇ ಮುಖ್ಯಗುರಿಯನ್ನಾಗಿಸಿ ಕೊಂಡಿರುವ ರೋಟರಿ ಕ್ಲಬ್ ರಕ್ತದಾನ, ಕೃಷಿ, ಹಲವಾರು ಬಡಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಶ್ರಮಿಸುತ್ತಿದೆ. ಕಂಪಾನಿಯೋ ಸಂಸ್ಥೆ ಸಹಕಾರದಿಂದ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ರೂಪಿಸುತ್ತಿದೆ. ಆರೋಗ್ಯ, ರಕ್ತದಾನ, ನೇತ್ರ ಚಿಕಿತ್ಸೆ ಮತ್ತಿತರ ಆರೋಗ್ಯ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಉದ್ದೇಶ ಹೊಂದಿದೆ ಎಂದರು.
ರೋಟರಿ ಕ್ಲಬ್ ಚನ್ನರಾಯಪಟ್ಟಣ ವಿಷನ್‌ನ ವಲಯಸೇನಾನಿ ಜಯ ರಾಘವೇಂದ್ರ, ಖಜಾಂಚಿ ನಟರಾಜ್, ಕಾರ್ಯದರ್ಶಿ ಡಾ.ಎಸ್.ಎಸ್. ಕುಮುದಾ, ಮಾಜಿ ಸಹಾಯಕ ಪ್ರಾಂತಪಾಲ ಪದ್ಮನಾಭ, ಸದಸ್ಯ ಜ್ಯೋತಿ, ಪರಮೇಶ್, ಫಿಜಿಯೋಥೆರಪಿಸ್ಟ್ ಮೇಘನಾ ಇತರರು ಇದ್ದರು.