

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯದ ವಿವಿಧ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳ ವ್ಯಾಪಾರ ಮಳಿಗೆಗಳ ಪರಿಶೀಲನೆ ನಡೆಸಿದ್ದು, ಈ ವೇಳೆ ಹಲವು ಮಳಿಗೆಗಳಲ್ಲಿ ನೈರ್ಮಲ್ಯದ ಕೊರತೆ ಹಾಗೂ ಪರವಾನಗಿ ಹೊಂದಿರದಿರುವುದು ದೃಢಪಟ್ಟಿದೆ.
ಮುಖ್ಯಮಂತ್ರಿ ಕಚೇರಿ ಸೂಚನೆ ಮೇರೆಗೆ ಜೂನ್ ತಿಂಗಳಲ್ಲಿ ವಿಶೇಷ ಅಭಿಯಾನ ನಡೆಸಲಾಗಿದೆ. ರಾಜ್ಯದಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ 201 ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲಿ ಇರುವ 748 ವ್ಯಾಪಾರ ಮಳಿಗೆಗಳು ಹಾಗೂ ಆಹಾರ ಉದ್ದಿಮೆಗಳನ್ನು ಪರಿಶೀಲನೆ ಮಾಡಲಾಗಿದೆ ಎಂದು ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಈ ಪರಿಶೀಲನೆ ಸಂದರ್ಭದಲ್ಲಿ 179 ವ್ಯಾಪಾರ ಮಳಿಗೆಗಳು ಪರವಾನಗಿ ಹೊಂದಿಲ್ಲದಿರುವುದು ದೃಢಪಟ್ಟಿದೆ. 120 ಆಹಾರ ಮಳಿಗೆಗಳಲ್ಲಿ ನೈರ್ಮಲ್ಯದ ಕೊರತೆ ಕಂಡುಬಂದಿದ್ದು, ನೋಟಿಸ್‌ಗಳನ್ನು ನೀಡಲಾಗಿದೆ. 19 ಆಹಾರ ಮಳಿಗೆಗಳಿಗೆಗಳಿಂದ ಒಟ್ಟು 48 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಪರಿಶೀಲನಾ ಭೇಟಿಯ ಸಮಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಪಾಲಿಸುವಂತೆ ಅರಿವು ಮೂಡಿಸಲಾಗಿದೆ. ಪುನರ ಪರಿಶೀಲನೆ ಸಂದರ್ಭದಲ್ಲಿ ಸಂಬಂಧಿಸಿದ ಲೋಪದೋಷಗಳನ್ನು ಸರಿಪಡಿಸಿಕೊಳ್ಳದೇ ಇದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.