

ಬೆಂಗಳೂರು: ಆಹಾರ ಪದಾರ್ಥಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈಗಾಗಲೇ ವಿಶೇಷ ಆಂದೋಲನ ಕೈಗೊಂಡಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಗೌರಿ ಮತ್ತು ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಸಾದ ವಿತರಣೆಯಲ್ಲಿ ನೈರ್ಮಲ್ಯತೆ, ಗುಣಮಟ್ಟ ಮತ್ತು ಸುರಕ್ಷತೆ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ.
ಈ ಸಂಬಂಧ ಹಬ್ಬದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವ ಸಂದರ್ಭದಲ್ಲಿ ಎಫ್ಎಸ್‌ಎಸ್‌ಎಐ ನೋಂದಣಿ ಅಥವಾ ಪರವಾನಗಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಪ್ರಸಾದ ಸಿದ್ಧಪಡಿಸಿ ಭಕ್ತರಿಗೆ ವಿನಿಯೋಗಿಸುವಂತೆ ತಿಳಿಸಿದೆ. ಈ ನಿಯಮಗಳ ಪಾಲನೆ ಆಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ರಾಜ್ಯದ ಎಲ್ಲ ಜಿಲ್ಲಾ ಅಂಕಿತಾಧಿಕಾರಿಗಳಿಗೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.