

ಪಿರಿಯಾಪಟ್ಟಣ: ತಾಲೂಕಿನಲ್ಲಿ ಅಡುಗೆ ಸಿಬ್ಬಂದಿ ಪರಿಶ್ರಮದಿಂದ ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಸಿ.ಪ್ರಶಾಂತ್ ಹೇಳಿದರು.
ಪಟ್ಟಣದ ಜಿಜೆಸಿಪಿ ಆವರಣದಲ್ಲಿ ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗೆ ಶುಕ್ರವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಿನಾದ್ಯಂತ ಅಕ್ಷರ ದಾಸೋಹ ಹಾಗೂ ಪೂರಕ ಪೌಷ್ಠಿಕ ಆಹಾರ ವಿತರಣೆಗಾಗಿ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ, ಕ್ಷೀರಭಾಗ್ಯ ಕಾರ್ಯಕ್ರಮಗಳು ಅಡುಗೆ ಸಿಬ್ಬಂದಿಗಳ ಕರ್ತವ್ಯ ಪರತೆಯಿಂದ ನಮ್ಮೆಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆಯಾಗುತ್ತಿದೆ ಮುಂದಿನ ದಿನಗಳಲ್ಲಿಯೂ ತಮ್ಮ ಕರ್ತವ್ಯ ಇದೆ ರೀತಿ ಮುಂದುವರಿಯಲಿ ಎಂದರು.
ಬಿಇಒ ರವಿ ಪ್ರಸನ್ನ ಮಾತನಾಡಿ ಅಡುಗೆ ಸಿಬ್ಬಂದಿಗಳು ಮಾತೃ ಹೃದಯದಂತೆ ಮಕ್ಕಳಿಗೆ ಆಹಾರ ತಯಾರಿಸಿ ಬಡಿಸುವ ಮೂಲಕ ಪಾಲಕರಂತೆ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಅಗ್ನಿಶಾಮಕ ಠಾಣಾಧಿಕಾರಿ ಅಜಯ್ ಕುಮಾರ್ ಅಡುಗೆ ಸಿಬ್ಬಂದಿ ಬೆಂಕಿ ಅವಘಡ ಸಂದರ್ಭ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಹಾಗೂ ಅಗ್ನಿ ಅವಘಡಗಳ ಕುರಿರು ಪ್ರಾತ್ಯಕ್ಷತೆ ನೀಡಿದರು.
ಆರೋಗ್ಯ ಇಲಾಖೆ ತಾಲೂಕು ಶಿಕ್ಷಣಾಧಿಕಾರಿ ಪಿ.ಪಿ.ಲತಾ ಮಾತನಾಡಿ ಸ್ವಚ್ಛತೆಯ ಮತ್ತು ಸುರಕ್ಷತೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ 60 ವರ್ಷ ಪೂರ್ಣಗೊಂಡು ನಿವೃತ್ತರಾದ ಅಡುಗೆ ಸಿಬ್ಬಂದಿಗೆ ಬೀಳ್ಕೊಡುಗೆ ನೀಡಲಾಯಿತು. ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಸಿಆರ್‌ಪಿ ಗಣೇಶ್ ಕುಮಾರ್, ಸುದರ್ಶನ್, ಶಿವಕುಮಾರ್, ಕವಿತಾ ಮತ್ತು ಜಯಲಕ್ಷ್ಮೀ ಭಾಗವಹಿಸಿದ್ದರು. ಬಿಐಇಆರ್ ಟಿ.ಪುಟ್ಟರಾಜು, ಜಿಜೆಸಿಪಿ ಉಪಪ್ರಾಂಶುಪಾಲ ಜೆ.ಅಶೋಕ್, ತಾಲೂಕಿನ ವಿವಿಧೆಡೆಯ ಅಡುಗೆ ಸಿಬ್ಬಂದಿ ಇದ್ದರು.