

ಗಂಡಸಿ: ಇಲ್ಲಿನ ಹ್ಯಾಂಡ್‌ಪೋಸ್ಟ್‌ನ ಪುಷ್ಪರವಿ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಹಾರ ಮೇಳ ಆಯೋಜಿಸಲಾಗಿತ್ತು.
ಈ ಮೇಳದಲ್ಲಿ ಶಾಲೆಯ 200 ಹೆಚ್ಚು ವಿದ್ಯಾರ್ಥಿಗಳು ತಮ್ಮ ಪಾಲಕರ ನೆರವಿನಿಂದ ವಿವಿಧ ಬಗೆಯ ಸಸ್ಯಾಹಾರ ಮತ್ತು ಮಾಂಸಾಹಾರ ಭಕ್ಷೃ ಭೋಜನವನ್ನು ಮಾಡಿಸಿಕೊಂಡು ಬಂದಿದ್ದರು. ನಾಟಿ ಕೋಳಿ ಸಾರು, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಕಬಾಬ್, ಮಟನ್ ಸಾರು ಜತೆಗೆ ರಾಗಿಮುದ್ದೆ, ಚಪಾತಿ ಹಾಗೂ ಸಸ್ಯಹಾರ ವಿಭಾಗದಲ್ಲಿ ಒಬ್ಬಟ್ಟು, ಪೂರಿ ಸಾಗು, ಮಸಾಲೆ ದೋಸೆ, ರೈಸ್ ಬಾತ್, ವಿವಿಧ ಬಗೆಯ ಬಜ್ಜಿ ಮಾರಾಟ ಮಾಡಿದರು. ಸ್ವ ಸಹಾಯ ಪದ್ಧತಿಯ ರೀತಿಯಲ್ಲಿ ಗ್ರಾಹಕರಿಗೆ ಮತ್ತು ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗೆ ಉಣಬಡಿಸಿದ್ದು ವಿಶೇಷವಾಗಿತ್ತು.
ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ರೇವಣ್ಣ ಗೌಡ, ಶಾಲಾ- ಕಾಲೇಜುಗಳಲ್ಲಿ ಈ ರೀತಿಯ ಆಹಾರ ಮೇಳಗಳನ್ನು ಏರ್ಪಡಿಸುವುದರಿಂದ ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಬೆಳೆಯಲಿದೆ ಎಂದರು.
ಮುಖ್ಯಶಿಕ್ಷಕಿ ಗೀತಾ, ಜೆಟಿಒ ಚಂದ್ರೇಗೌಡ ಮತ್ತು ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.