

ವಿರಾಜಪೇಟೆ: ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಗಮನಹರಿಸಲಿ ಎಂದು ಸಮಾಜ ಸೇವಕಿ ಹಾಗೂ ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ಸಜೇಶ್ ಹೇಳಿದರು.
ಸೋಮವಾರ ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಆದರ್ಶ ಪುರುಷರ ತತ್ವ ಸಿದ್ಧಾಂತಗಳನ್ನು ಅನುಸರಿಸಬೇಕು. ನಮ್ಮ ಭವಿಷ್ಯದ ಅಭಿವೃದ್ಧಿ ನಮ್ಮಿಂದಲೇ ಆಗಿದೆ. ಪರಸ್ಪರ ಸ್ನೇಹ, ಸಹಕಾರವಿದ್ದಾಗ ಮಾತ್ರ ಸಮಾಜ ಸೇವೆಗೆ ಅರ್ಥ ಬರುತ್ತದೆ. ಸಮಾಜ ಸೇವೆಯೂ ಪುಣ್ಯ ಕೆಲಸ ಮಾಡಿದಂತೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೇಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ.ಮದಲೈ ಮುತ್ತು ಮಾತನಾಡಿ, ಗ್ರಾಮದ ಸರ್ವ ಜನರ ಸಹಕಾರದಿಂದ ಶಿಬಿರ ಯಶಸ್ವಿಯಾಗಿ ನಡೆದಿದೆ. ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತದನ್ನು ಜೀವನದಲ್ಲಿ ಅಳವಡಿಸುವುದರ ಮೂಲಕ ಶಿಸ್ತು ಬದ್ಧ ಜೀವನ ನಡೆಸಿ ಎಂದು ಕರೆ ನೀಡಿದರು.
ಭಾರತೀಯ ಭೂ ಸೇನೆಯ ನಿವೃತ ಕ್ಯಾಪ್ಟನ್ ಬಿ.ವಿ. ಭವಾನಿಶಂಕರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೃಢ ನಿರ್ಧಾರ ಕೈಗೊಳ್ಳಲು ಇಂತಹ ಶಿಬಿರಗಳು ಪ್ರಮುಖವಾಗಿದೆ. ವಿದ್ಯಾರ್ಥಿಗಳು ಶಿಸ್ತು ಹಾಗೂ ಪ್ರಾಮಾಣಿಕತೆ ಕಲಿಯಲು ಎನ್‌ಎಸ್‌ಎಸ್ ಉತ್ತಮ ವೇದಿಕೆಯಾಗಿದೆ ಎಂದರು.
ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಾಜ ಸೇವೆ ಮಾಡಲು ಎನ್‌ಎಸ್‌ಎಸ್ ಉತ್ತಮ ಅವಕಾಶ ನೀಡುತ್ತದೆ. ವಿದ್ಯಾರ್ಥಿ ದಿಸೆಯಿಂದಲೇ ಉತ್ತಮ ಸಂವಹನ ಕೌಶಲ ಹಾಗೂ ವೃತ್ತಿ ಕೌಶಲ ಅಳವಡಿಸಿಕೊಳ್ಳಿ ಎಂದರು.
ಬೆಟೋಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ, ಸ.ಹಿ.ಪ್ರಾ. ಶಾಲೆ ಹೆಗ್ಗಳದ ಮುಖ್ಯ ಶಿಕ್ಷಕಿ ಹೇಮಲತಾ, ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್, ಉಪನ್ಯಾಸಕಿ ವಿಲೀನ, ಬೆಟೋಳಿ ಗ್ರಾಮ ಪಂಚಾಯಿತಿ ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಇದ್ದರು.