ಅಂಬೇಡ್ಕರ್ ಆಶಯದಂತೆ ಬೌದ್ಧಧರ್ಮ ಅನುಸರಿಸಿ

ಅಂಬೇಡ್ಕರ್ ಆಶಯದಂತೆ ಬೌದ್ಧಧರ್ಮ ಅನುಸರಿಸಿ
Published on

ಬೇಲೂರು: ಡಾ.ಅಂಬೇಡ್ಕರ್ ಅವರ ಆಶಯದಂತೆ ನಾವೆಲ್ಲರೂ ಬೌದ್ಧ ಧರ್ಮವನ್ನು ಒಪ್ಪಿಕೊಂಡು ಅವರ ಮಾರ್ಗದಲ್ಲಿ ನಡೆದರೆ ಮಾತ್ರ ನಿಜವಾಗಿಯೂ ಬಾಬಾ ಸಾಹೇಬರ ಅನುಯಾಯಿಗಳು ಎಂದು ಹೇಳಿಕೊಳ್ಳಲು ನಾವು ಅರ್ಹರಾಗುತ್ತೇವೆ ಎಂದು ಭಾರತೀಯ ಬೌದ್ಧ ಮಹಾಸಭಾ ಹಾಸನ ಜಿಲ್ಲಾಧ್ಯಕ್ಷ ಎಚ್.ಟಿ.ಬಸವರಾಜು ಹೇಳಿದರು.

ಭಾರತೀಯ ಬೌದ್ಧ ಮಹಾಸಭಾದಿಂದ ಮಂಗಳವಾರ ಸಂಜೆ ಪಟ್ಟಣದ ವಿದ್ಯಾವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಬೇಲೂರು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಬೌದ್ಧ ಮಹಾಸಭಾ ಡಾ.ಅಂಬೇಡ್ಕರ್ ಅವರು ಸ್ಥಾಪಿಸಿದ ಧಾರ್ಮಿಕ ಸಂಸ್ಥೆಯಾಗಿದೆ. ಈ ಸಂಸ್ಥೆಯು ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಡಾ.ಯಶ್ವಂತ ರಾವ್ ಅಂಬೇಡ್ಕರ್ ಅವರು ಈಗ ಅಧ್ಯಕ್ಷರಾಗಿದ್ದು, ಭಾರತದಾದ್ಯಂತ ಅಂಬೇಡ್ಕರ್ ಅವರೇ ರಚಿಸಿದ ಬೈಲಾ ಹೊಂದಿದ್ದು, ಮೂಲ ಬೈಲಾದಂತೆಯೇ ಸಂಸ್ಥೆಯ ಕಾರ್ಯ ಚಟುವಟಿಕೆಗಳು ನಡೆಯುತ್ತಿರುವುದರಿಂದ ಅವರ ಆಶಯಗಳಂತೆ ನಡೆದುಕೊಂಡು ಸಾಗುವ ಮೂಲಕ ಸಮಾಜವನ್ನು ಜಾಗೃತ ಗೊಳಿಸಬೇಕಿದೆ ಎಂದರು.

ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಗೌರವ್ ಮಾತನಾಡಿ, ಭಾರತದಲ್ಲಿ ಯಾವುದೇ ವ್ಯಕ್ತಿಯನ್ನು ಆತನ ಜಾತಿ, ಧರ್ಮದ ಮೂಲಕ ಗುರುತಿಸುತ್ತಾರೆ. ಜತೆಗೆ ಎಲ್ಲ ಧರ್ಮದವರು ಅವರವರ ಐಡೆಂಟಿಟಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ, ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಅಸ್ಪಶ್ಯರು ಜಾತಿ ಹೇಳಲು ಹಿಂಜರಿಯುತ್ತಾರೆ. ಆದ್ದರಿಂದ ಡಾ.ಅಂಬೇಡ್ಕರ್ ನೀಡಿರುವ ಬೌದ್ಧ ಧರ್ಮವನ್ನು ಅನುಸರಿಸಿ ನಡೆದರೆ ನಾವೆಲ್ಲ ಬೌದ್ಧರೆಂದು ಹೆಮ್ಮೆಯಿಂದ ಹೇಳಿಕೊಳ್ಳಲು ಪ್ರತಿ ಮನೆಯಲ್ಲೂ ಬೌದ್ಧ ಧರ್ಮವನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ಬೌದ್ಧ ಧರ್ಮವನ್ನು ಮನೆ ಮನೆಗೂ ತಲುಪಿಸಲು ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ಬೇರೆ ಬೇರೆ ಬುದ್ಧ ವಿಹಾರಗಳಲ್ಲಿ ಸಂಘ- ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರೂ, ಮಾತೃಸಂಸ್ಥೆಯಾಗಿ ನಾವೆಲ್ಲರೂ ಭಾರತೀಯ ಬೌದ್ಧ ಮಹಾಸಭಾದಡಿ ಕೆಲಸ ಮಾಡೋಣ ಎಂದರು.

ಗಾಂಧಾರ ಬುದ್ಧ ವಿಹಾರದ ಪ್ರಧಾನ ಕಾರ್ಯದರ್ಶಿ ವಕೀಲ ರಾಜು, ಭಾರತೀಯ ಬೌದ್ಧ ಮಹಾಸಭಾ ಹಿರಿಯ ಮುಖಂಡ ವೀರಭದ್ರಯ್ಯ, ಜಿಲ್ಲಾ ಉಪಾಧ್ಯಕ್ಷ ಆನಂದ್, ಗಂಗಾಧರ್, ಮುಖಂಡ ವಿರೂಪಾಕ್ಷ ರಾವಣ್, ಮಂಜುನಾಥ್ ಮೊಗಸಾವರ, ಕುಮಾರ್ ಮಾಳೆಗೆರೆ, ಹರೀಶ್ ಮೇಕೆದಾಟು, ದೇವರಾಜು, ರಂಜನ್ ಪ್ರಬುದ್ ಸೇರಿದಂತೆ ಇತರರಿದ್ದರು.

ತಾಲೂಕು ಅಧ್ಯಕ್ಷರಾಗಿ ಡಾ.ಎಂ.ಎಂ ರಮೇಶ್: ಬೇಲೂರು ತಾಲೂಕಿನ ಭಾರತೀಯ ಬೌದ್ಧ ಮಹಾಸಭಾದ ನೂತನ ತಾಲೂಕು ಅಧ್ಯಕ್ಷರಾಗಿ ಡಾ.ಎಂ.ಎಂ ರಮೇಶ್, ಉಪಾಧ್ಯಕ್ಷರಾಗಿ, ಲಕ್ಷ್ಮಣ್ ಬೇಲೂರು, ಬಾಬು ಶಂಭುಗನಹಳ್ಳಿ, ಮಂಜುನಾಥ್ ಸಾಣೇನಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಗೋವಿನಹಳ್ಳಿ, ಖಜಾಂಚಿಯಾಗಿ ಪ್ರವೀಣ್ ಬೌದ್ಧ್ ಬಳದಕಲ್‌ರನ್ನು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net