

ಗೋಕರ್ಣ: ಕನ್ನಡ ಸಂಸ್ಕೃತಿಯ ಮೂಲ ಜೀವಾಳ ಜಾನಪದವಾಗಿದೆ. ಜಾನಪದದಂತೆಯೇ ನಾಡಿನ ಗಂಡುಮೆಟ್ಟಿನ ಕಲೆ ಯಕ್ಷಗಾನವೂ ಕನ್ನಡದ ಮೌಲ್ಯ ಮತ್ತು ಮಹತಿಗೆ ಕೊಟ್ಟ ಕಾಣಿಕೆಗಳು ಅಪಾರ ಮತ್ತು ಅವಿಸ್ಮರಣೀಯ ಎಂದು ಹಿರಿಯ ಜಾನಪದ ವಿದ್ವಾಂಸ, ನಿವೃತ್ತ ಪ್ರಾಚಾರ್ಯ ಡಾ.ಎನ್.ಆರ್. ನಾಯಕ ನುಡಿದರು.
ಇಲ್ಲಿನ ಭದ್ರಕಾಳಿ ಕಾಲೇಜ್ ಸಭಾಂಗಣದಲ್ಲಿ ಧಾರವಾಡದ ಪಂ. ಪುಟ್ಟರಾಜ ಗವಾಯಿ ಕಲಾ ಪ್ರತಿಷ್ಠಾನ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಶಿಕ್ಷಕ ಬೀರಣ್ಣ ನಾಯಕ ಅಡಿಗೋಣ ಅವರಿಗೆ ‘ರಂಗ ಚಂದ್ರ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
ಶಿಕ್ಷಕ ವೃತ್ತಿಯ ಜತೆಗೆ ಕಳೆದ ಆರು ದಶಕಗಳಿಗೂ ಹೆಚ್ಚಿನ ಸಮಯದಿಂದ ಜಿಲ್ಲೆಯ ಗ್ರಾಮಾಂತರದಲ್ಲಿ ಯಕ್ಷಗಾನವನ್ನು ಬೆಳೆಸಿ ಪಸರಿಸಿದ ಬೀರಣ್ಣ ನಾಯಕ ಅವರ ಅಭಿಮಾನ ಪೂರ್ವಕ ಉದಾರ ಸೇವೆಯನ್ನು ಕೊಂಡಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಡಾ.ವಿ.ಆರ್. ಮಲ್ಲನ್ ಮಾತನಾಡಿ, ಬೀರಣ್ಣ ನಾಯಕ ಅವರು ಯಕ್ಷಗಾನ ಕಲೆಗೆ ತೋರಿದ ಅಕ್ಕರೆ ಮತ್ತು ನೀಡಿದ ಸೇವೆ ಸ್ಮರಿಸೋಣ ಎಂದರು.
ಪ್ರಶಸ್ತಿ ಮತ್ತು ಸನ್ಮಾನ ಸ್ವೀಕರಿಸಿ ಮಾತನಾಡಿದ ಬೀರಣ್ಣ ನಾಯಕ, ಜಗತ್ತಿನಲ್ಲಿ ಅತ್ಯಂತ ಅಪರೂಪದ ಅಚ್ಚ ಕನ್ನಡದ ನೆಲ ಭಾಷೆಯ ಕಲೆ ಯಕ್ಷಗಾನವಾಗಿದೆ. ಈ ಮಹಾನ್ ಕಲೆಯಿಂದಾಗಿ ಇವತ್ತು ನನ್ನಂತಹ ಸಾಮಾನ್ಯನೂ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಪಂ. ಪುಟ್ಟರಾಜ ಗವಾಯಿ ಕಲಾ ಪ್ರತಿಷ್ಠಾನ ನನಗೆ ನೀಡಿದ ಪ್ರಶಸ್ತಿ ಗೌರವ ನಿಜಕ್ಕೂ ಅಭಿನಂದನೀಯ. ಪ್ರತಿಷ್ಠಾನ ಇದೇ ರೀತಿಯಲ್ಲಿ ಉಳಿದ ಕಲಾವಿದರನ್ನೂ ಗುರುತಿಸುವಂತಾಗಲಿ ಎಂದು ಹಾರೈಸಿದರು.
ಕಾಲೇಜ್ ಸಮಿತಿ ಕಾರ್ಯದರ್ಶಿ ಜಿ.ಎನ್. ನಾಯಕ, ಸಾಹಿತಿ ಮಾರ್ತಾಂಡಪ್ಪ, ವೆಂಟು ಮಾಸ್ತರ್ ಶೀಳ್ಯ ಮಾತನಾಡಿದರು. ಸಾಹಿತಿ ಕೆ.ಎಚ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ಸಾಹಿತಿ ಕೃಷ್ಣಮೂರ್ತಿ ಗೊಲ್ಲರ್, ಮಂಜುನಾಥ ನಾಯಕ, ನಾಗೇಶ ನಾಯಕ, ಮಂಜುನಾಥ ಹಿತ್ತಲಮಕ್ಕಿ ಮುಂತಾದವರಿದ್ದರು. ಪ್ರಾಚಾರ್ಯ ಎಸ್.ಸಿ. ನಾಯಕ್ ಸ್ವಾಗತಿಸಿದರು. ಉಪನ್ಯಾಸಕಿ ಪಲ್ಲವಿ ಹೆಗಡೆ ಮತ್ತು ಉಪನ್ಯಾಸಕ ರಾಮಮೂರ್ತಿ ನಾಯಕ ನಿರ್ವಹಿಸಿದರು.