ಕ್ಯಾಲಕೊಂಡ ಬಸವರಾಜಗೆ ಜಾನಪದ ಅಕಾಡೆಮಿ ಪ್ರಶಸ್ತಿ

4SGN01
Published on

ಶಿಗ್ಗಾಂವಿ: 2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ತಾಲೂಕಿನ ಕ್ಯಾಲಕೊಂಡ ಗ್ರಾಮದ ಜಾನಪದ ಮತ್ತು ತತ್ವಪದ ಕಲಾವಿದ ಬಸವರಾಜ ತಿರಕಪ್ಪ ಶಿಗ್ಗಾಂವಿ ಭಾಜನರಾಗಿದ್ದಾರೆ.
ಬಸವರಾಜ ಶಿಗ್ಗಾಂವಿ ಅವರು ದೇಶದ ವಿವಿಧೆಡೆ ಕಲಾ ಸೇವೆ ಸಲ್ಲಿಸಿದ್ದಾರೆ. ಕಾಶಿ, ಮಹಾರಾಷ್ಟ್ರದ ಅಂಬರನಾಥ ದೊಂಬಿವಲ್ಲಿ, ಗುಜರಾತಿನ ಬರೋಡಾ ಸೇರಿದಂತೆ ರಾಜ್ಯದ ವಿವಿಧೆಡೆ ಆಯೋಜಿಸಿದ್ದ ಉತ್ಸವಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದ ರೈತ ಬಿಮಾ ವಿಕಾಸ್ ಕಾರ್ಯಕ್ರಮ ಸೇರಿದಂತೆ ಅನೇಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆ ಮತ್ತು ರೈತಗೀತೆ ಹಾಡಿ ಗಮನ ಸೆಳೆದಿದ್ದಾರೆ. ಈ ಎಲ್ಲ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕ್ಯಾಲಗೊಂಡ ಗ್ರಾಮದ ಕೃಷಿಕ ಕುಟುಂಬದಲ್ಲಿ 1964ರಲ್ಲಿ ಜನಿಸಿದ ಬಸವರಾಜ, ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಹುಬ್ಬಳ್ಳಿಯ ನೆಹರು ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಬಸವರಾಜ ಅವರ ಪಾಲಕರೂ ಜಾನಪದ ಕಲಾವಿದರು. ಸೋಬಾನ ಪದ ಹಾಡುವುದಲ್ಲಿ ತಾಯಿ ಗೌರಮ್ಮ ಗ್ರಾಮದಲ್ಲಿ ಹೆಸರುವಾಸಿಯಾಗಿದ್ದರು. ತಂದೆ ತಿರಕಪ್ಪ ಅವರು ಕೃಷಿ ಕೆಲಸದ ಜತೆಗೆ ಬಿಡುವಿನ ವೇಳೆಯಲ್ಲಿ ಗ್ರಾಮದ ಎಲ್ಲಮ್ಮ, ಉಡಚಮ್ಮ ದೇವಸ್ಥಾನದಲ್ಲಿ ಭಜನೆ ಪದಗಳನ್ನು ಹಾಡುತ್ತಿದ್ದರು. ತಂದೆಯ ಜತೆಗೆ ಭಜನೆಗೆ ಹೋಗುತ್ತಿದ್ದ ಬಸವರಾಜ, ಆಗಿನಿಂದಲೇ ತತ್ವಪದಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಶರೀಫರ ಮತ್ತು ಕನಕದಾಸರ ತತ್ವಪದಗಳನ್ನು ಹಾಡಲು ಆರಂಭಿಸಿದ ಬಸವರಾಜ, ಪದವಿಯ ನಂತರ ಕೃಷಿ ಜತೆಗೆ ಹಾಡುಗಾರಿಕೆಯನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡರು. ಅಲ್ಲದೆ, ಜಾನಪದ ಕಲಾ ತಂಡ ಕಟ್ಟಿಕೊಂಡು ನಾಡಿನಾದ್ಯಂತ ಹಾಡುಗಾರಿಕೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net