

ರಾಮನಗರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಿಲ್ಲೆಯ 5 ತಾಲೂಕಿನ ಕಂದಾಯ ನೌಕರರು ಶುಕ್ರವಾರ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಕಂದಾಯ ಇಲಾಖಾ ನೌಕರರ ರಾಮನಗರ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷ ಎಂ. ಹರ್ಷ ಮಾತನಾಡಿ, ಕಂದಾಯ ಇಲಾಖೆ 21ಕ್ಕೂ ಅಧಿಕ ಮೊಬೈಲ್-ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದೆ. ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್ ಸಾಧನ, ಲ್ಯಾಪ್‌ಟಾಪ್, ಇಂಟರ್‌ನೆಟ್, ಸ್ಕ್ಯಾನರ್ ಸೇರಿ ಸೌಲಭ್ಯ ಒದಗಿಸಿಲ್ಲ ಎಂದರು.
ಕಳೆದ ಎರಡು ವರ್ಷಗಳಿಂದ ಕಂದಾಯ ಇಲಾಖೆ ನೌಕರರ ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಇದುವರೆಗೆ ಬಗೆಹರಿಸುವ ಕೆಲಸ ಆಗಿಲ್ಲ. ಕ್ಷೇತ್ರ ಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳ ಸಾವು ನೋವುಗಳು ಆಗುತ್ತಿದ್ದು, ನಿರಂತರವಾಗಿ ಮಾರಣಾಂತಿಕ ಹಲ್ಲೆ ನಡೆಯುತ್ತಿದೆ. ಅಲ್ಲದೆ ಮಾನಸಿಕ ಹಾಗೂ ದೈಹಿಕವಾಗಿ ವೈತಿರಿಕ್ತ ಪರಿಣಾಮ ನಮ್ಮ ನೌಕರರ ಮೇಲೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಕೆಸಿಎಸ್‌ಆರ್ ನಿಯಮಾವಳಿಯಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರಲು, ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಎನ್. ರಮೇಶ್ ಮಾತನಾಡಿ, ಇಲಾಖೆಯ ಕೆಲಸದ ಜತೆಗೆ ಇತರೆ ಒತ್ತಡದ ಕೆಲಸಗಳನ್ನು ನಮಗೆ ನಿಯೋಜನೆ ಮಾಡುತ್ತಿರುವುದರಿಂದ ಕೆಲಸ ನಿರ್ವಹಿಸಲು ಕಷ್ಟವಾಗಿದೆ. ಕಂದಾಯ ಇಲಾಖೆ ನೌಕರರ ಬೇಡಿಕೆ ಮತ್ತು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವ ಮೂಲಕ ಸಚಿವರು ಮತ್ತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಉಪಾಧ್ಯಕ್ಷ ಪುಟ್ಟಸ್ವಾಮಿಗೌಡ, ಕಾರ್ಯಾಧ್ಯಕ್ಷ ಯತೀಶ್, ತಾಲೂಕು ಅಧ್ಯಕ್ಷರಾದ ಪ್ರಸನ್ನಕುಮಾರ್, ಜೆ. ಚಂದ್ರೇಗೌಡ, ರಾಜಸ್ವ ನಿರೀಕ್ಷಕರಾದ ಪುಟ್ಟರಾಜು, ಶಿವಕುಮಾರ್, ನಾಗರಾಜು, ಚಂದ್ರಶೇಖರ್, ಸತೀಶ್‌ಚಂದ್ರ, ನಟರಾಜು, ಮಧು, ಸೋಮಶೇಖರ್, ಶ್ರೀಧರ್, ರೆಹಮಾನ್, ವೀರೇಶ್ ಇದ್ದರು.
"ಕಂದಾಯ ಇಲಾಖಾ ನೌಕರರ ಕಾರ್ಯ ಒತ್ತಡ ಹೆಚ್ಚಾಗಿದ್ದು, ಅವರ ಬೇಡಿಕೆ ಪ್ರಸ್ತುತವಾಗಿದೆ. ನೌಕರರ ಜತೆ ಜಿಲ್ಲಾ ಸರ್ಕಾರಿ ನೌಕರರ ಸಂಘವಿದ್ದು, ಅವರಿಗೆ ಸಂಘ ಬೆಂಬಲ ವ್ಯಕ್ತಪಡಿಸುತ್ತದೆ."
ಕೆ. ಸತೀಶ್, ಜಿಲ್ಲಾಧ್ಯಕ್ಷ, ಸರ್ಕಾರಿ ನೌಕರರ ಸಂಘ, ರಾಮನಗರ.