ಮೇವು ಕೊರತೆ ಆಗದಂತೆ ಬ್ಯಾಂಕ್ ಸ್ಥಾಪಿಸಿ, ರೈತರ ಮನವಿ

Formers appeal for Foodbank
ಅಳವಂಡಿಯಲ್ಲಿ ಮೇವು ಬ್ಯಾಂಕ್ ಸ್ಥಾಪಿಸುವಂತೆ ರೈತರು ಉಪ ತಹಸೀಲ್ದಾರ್ ಕಚೇರಿಯ ಕೇಸ್ ವರ್ಕ್‌ರ್ ಶ್ರೀಕಾಂತಗೆ ಮನವಿ ಸಲ್ಲಿಸಿದರು.
Published on

ಅಳವಂಡಿ: ಈ ವರ್ಷ ಅಶ್ವಿನಿ, ಭರಣಿ, ಕೃತಿಕ, ರೋಹಿಣಿ ಮಳೆಯಾಗಿಲ್ಲ. ಜಾನುವಾರುಗಳಿಗೆ ಸಂಗ್ರಹಿಸಿಟ್ಟ ಮೇವು ಖಾಲಿಯಾಗುತ್ತಾ ಬಂದಿದ್ದು, ರೈತರನ್ನು ಸಂಕಷ್ಟಕ್ಕೆ ದೂಡಿದೆ. ಈ ಹಿನ್ನೆಲೆಯಲ್ಲಿ ಮೇವು ಬ್ಯಾಂಕ ಸ್ಥಾಪಿಸುವಂತೆ ಮಂಗಳವಾರ ಉಪತಹಸೀಲ್ದಾರ್ ಕಚೇರಿಯ ಕೇಸ್ ವರ್ಕರ್ ಶ್ರೀಕಾಂತಗೆ ರೈತರು ಮನವಿ ಸಲ್ಲಿಸಿದರು.

ಕಳೆದೆರಡು ವರ್ಷಗಳ ಹಿಂದೆ ಮುಂಗಾರು ಪೂರ್ವ ಮಳೆ ಧಾರಾಕಾರವಾಗಿ ಸುರಿದಿದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆಯಾಗಿರಲಿಲ್ಲ. ಆದರೆ, ಈ ಬಾರಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತೊಂದರೆಯಾಗಿದೆ.

ಮುಂಗಾರು ಪೂರ್ವ ಮಳೆ ಸುರಿದರೆ ಅರಣ್ಯ ಪ್ರದೇಶ, ರಸ್ತೆ ಬದಿ, ಬದುವು ಹಾಗೂ ಪಾಳು ಭೂಮಿಯಲ್ಲಿ ಹುಲ್ಲು ಯಥೇಚ್ಛವಾಗಿ ಬೆಳೆಯುತ್ತದೆ. ಈ ಹುಲ್ಲು ಜಾನುವಾರುಗಳು, ಕುರಿ, ಆಡುಗಳಿಗೆ ಮೇಯಲು ಅನೂಕೂಲ ಆಗುತ್ತದೆ. ಹೊರಗಡೆ ಮೇಯ್ದು ಬಂದ ಜಾನುವಾರುಗಳಿಗೆ ರೈತ ಸಂಗ್ರಹಿಸಿಟ್ಟ ಮೇವಿನ ಅವಶ್ಯಕತೆ ಇರುವುದಿಲ್ಲ.

ಹುಲ್ಲು ಬೆಳೆಯದೇ ಇರುವುದರಿಂದ ಸಮಸ್ಯೆಯಾಗಿದ್ದು, ಜಾನುವಾರುಗಳಿಗೆ ಸಂಗ್ರಹಿಸಿದ ಮೇವನ್ನು ಹಾಕಬೇಕಾಗಿದೆ. ಜಿಲ್ಲೆಯಲ್ಲಿ ಅಲ್ಲಲ್ಲಿ ಭತ್ತ ಕಟಾವು ಕಾರ್ಯ ನಡೆದಿದ್ದು, ಭತ್ತದ ಹುಲ್ಲನ್ನು ಸಂಗ್ರಹಿಸಿ ರೈತರಿಗೆ ನೀಡಬೇಕು. ಸರ್ಕಾರ ಗ್ರಾಮದಲ್ಲಿ ಮೇವಿನ ಬ್ಯಾಂಕ್ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ರೈತರಾದ ಶಿವಗ್ಯಾನಪ್ಪ ನೀಲಿಹಿಂಡರ, ಮಂಜುನಾಥ ದೊಡ್ಡಮನಿ, ಭರತ ಟುಬಾಕಿ, ನವೀನ ಶಿಳ್ಳಿನ, ಶಂಕ್ರಪ್ಪ ಕೋಗಳಿ, ಹನುಮಂತಪ್ಪ ತಿಗರಿ, ರಾಮಣ್ಣ ಮೋರನಾಳ, ಶಂಭುಲಿಂಗಯ್ಯ ಪೂಜಾರ, ಪ್ರಭು ಕಲ್ಲಳ್ಳಿ ಇತರರಿದ್ದರು.

ಸದ್ಯ ಮೇವಿನ ಸಮಸ್ಯೆ ಇಲ್ಲ. ಆದರೆ, ಮಳೆ ಇದೇ ರೀತಿ ಕೈಕೊಟ್ಟರೆ ಮಾತ್ರ ತೊಂದರೆಯಾಗಲಿದೆ. ಮೇವು ಬ್ಯಾಂಕ್ ಸ್ಥಾಪನೆಗೆ ರೈತರು ನೀಡಿದ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.| ಶ್ರೀನಾಥ ಜೋಶಿ, ಉಪ ತಹಸೀಲ್ದಾರ್, ಅಳವಂಡಿ ಈಗಾಗಲೇ ನಾಲ್ಕು ಮಳೆ ಮುಗಿಯುತ್ತ ಬಂದಿದ್ದು, ಜಾನುವಾರುಗಳಿಗೆ ಮೇವಿನ ಕೊರತೆಯಾಗಲಿದೆ. ನೀರಾವರಿ ಪ್ರದೇಶದಲ್ಲಿ ಭತ್ತ ಕಟಾವು ನಡೆದಿದ್ದು, ಸರ್ಕಾರ ಹುಲ್ಲನ್ನು ಸಂಗ್ರಹಿಸಿ ರೈತರಿಗೆ ನೀಡಬೇಕು.| ಶಿವಗ್ಯಾನಪ್ಪ ನೀಲಿಹಿಂಡರ, ರೈತ, ಅಳವಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net