More

    ಜಿಲ್ಲೆಯಲ್ಲಿ ಕಾಡಲಿದೆಯೇ ಮೇವಿನ ಕೊರತೆ

    ದರ ಹೆಚ್ಚಳದಿಂದ ಹೈನುಗಾರರು ಹೈರಾಣ ಒಣ ಹುಲ್ಲಿಗೆ ಹೆಚ್ಚು ಬೇಡಿಕೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಕಳೆದೆರಡು ವರ್ಷ ಜಿಲ್ಲೆಯಲ್ಲಿ ಹೈನುಗಾರರಿಗೆ ಜಾನುವಾರು ಮೇವಿನ ಕೊರತೆ ಕಾಡಲಿಲ್ಲ. ಆದರೆ ಈ ಬಾರಿ ಕೊರತೆ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾಡಲಿದೆ ಎಂಬ ಆತಂಕ ಎದುರಾಗಿದೆ.
    ಬೇಸಿಗೆಗೂ ಮುನ್ನ ಮುಂಜಾಗ್ರತಾ ಕ್ರಮದಿಂದ ಜಿಲ್ಲೆಯಲ್ಲಿ ಮೂರ‌್ನಾಲ್ಕು ತಿಂಗಳಿಗೆ ಸಾಕಾಗುವಷ್ಟು ದಾಸ್ತಾನು ಇದೆ. ಆದ್ದರಿಂದ ಈ ಬಾರಿ ಮೇವಿಗೆ ಕೊರತೆಯಾಗುವ ಸಾಧ್ಯತೆ ಇಲ್ಲ ಎಂಬುದಾಗಿ ಜಿಲ್ಲಾ ಪಶುಪಾಲನಾ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದರೂ ಬಿಸಿಲ ಹೊಡೆತದಿಂದ ಕೊರತೆ ಕಾಡಬಹುದೆಂಬ ಆತಂಕ ಮನೆಮಾಡಿದೆ. ಈಗಾಗಲೇ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಮೇವಿಗಾಗಿ ರೈತರು ಪರದಾಡುತ್ತಿರುವ ಪ್ರಸಂಗ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಎದುರಾಗಲಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

    ಮಳೆಯಿಂದ ಕೊಳೆತ ಹುಲ್ಲು: ಕಳೆದ ವರ್ಷ ವರ್ಷಾಂತ್ಯದವರೆಗೆ ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಗಿ, ಮೆಕ್ಕೆಜೋಳದ ಹುಲ್ಲು ನಿರೀಕ್ಷಿತ ಮಟ್ಟದಲ್ಲಿ ರೈತರ ಕೈಸೇರಲಿಲ್ಲ. ಬಹುತೇಕ ಹುಲ್ಲು ಮಳೆಯಿಂದಾಗಿ ಜಮೀನುಗಳಲ್ಲೇ ಕೊಳೆಯುವಂತಾಯಿತು. ಇದರೊಂದಿಗೆ ಈ ಬಾರಿ ಕಳೆದ ನಾಲ್ಕೂ ತಿಂಗಳಿಂದ ಬಿರು ಬಿಸಿಲ ಕಾರಣದಿಂದ ಹಸಿ ಹುಲ್ಲಿನ ಕೊರತೆ ಎದುರಾಗಿದ್ದು, ಬಹುತೇಕ ಹೈನುಗಾರರು ಒಣ ಹುಲ್ಲಿನ ಬಳಕೆಗೆ ಮೊರೆಹೋಗಿದ್ದಾರೆ. ಇದರಿಂದ ಒಣಹುಲ್ಲಿಗೆ ಬೇಡಿಕೆ ಹೆಚ್ಚಿದ್ದು ಕೊರತೆ ಎದುರಾಗಿದೆ ಎನ್ನಲಾಗಿದೆ. ದಿನೇದಿನೆ ಬಿಸಿಲ ತಾಪ ಹೆಚ್ಚುತ್ತಿದ್ದು, ಜಾನುವಾರುಗಳಿಗೆ ಮೇವು ಪೂರೈಸುವುದು ರೈತಾಪಿ ವರ್ಗಕ್ಕೆ ಸವಾಲಿನ ಕೆಲಸವಾಗಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

    ಹುಲ್ಲಿನ ದರ ಏರಿಕೆ: ಹಸಿರು ಹುಲ್ಲಿನ ಕೊರತೆಯಿಂದ ಒಣ ಹುಲ್ಲಿಗೆ ಬೇಡಿಕೆ ಹೆಚ್ಚಿದ್ದು ಇದೀಗ ದರ ಏಕಾಏಕಿ ಹೆಚ್ಚತೊಡಗಿದೆ. ಒಂದು ಜಾನುವಾರಿಗೆ 5ರಿಂದ 6 ಕೆಜಿ ಮೇವು ಅಗತ್ಯವಿದೆ ಎಂದು ಅಂದಾಜಿಸಿದರೂ ಜಿಲ್ಲೆಯಲ್ಲಿ ಸುಮಾರು 1.60 ಲಕ್ಷ ಜಾನುವಾರುಗಳಿದ್ದು, ಅಗತ್ಯವಿರುವಷ್ಟು ಮೇವು ಪೂರೈಕೆ ಕಷ್ಟಸಾಧ್ಯ ಎನ್ನಲಾಗಿದೆ. ಒಣ ಹುಲ್ಲಿಗೆ ಬೇಡಿಕೆ ಹೆಚ್ಚಿದಷ್ಟು ದರದಲ್ಲೂ ಏರಿಕೆಯಾಗತೊಡಗಿದ್ದು, ಹೈನುಗಾರರಿಗೆ ಮೇವು ಒದಗಿಸುವುದು ದುಬಾರಿಯಾಗಿದೆ.

    ಯಂತ್ರಗಳು ಬಂದ ಬಳಿಕ ಕಷ್ಟ: ರಾಗಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಇತ್ತೀಚಿಗೆ ಮೇವಿನ ಜೋಳವೂ ಪ್ರವರ್ಧಮಾನಕ್ಕೆ ಬಂದಿದೆ. ಆದರೆ ಕಟಾವಿನ ವೇಳೆ ಯಂತ್ರೋಪಕರಣ ಬಳಕೆ ಹೆಚ್ಚಿದಂತೆ ಶೇಕಡ ಭಾಗದ ಹುಲ್ಲು ಜಮೀನಿನಲ್ಲೇ ಉಳಿಯುತ್ತದೆ. ಮಳೆಯಿಂದಾಗಿ ಉಳಿದ ಹುಲ್ಲೂ ಕೊಳೆತು ಉಪಯೋಗಕ್ಕೆ ಬಾರದಂತಾಗುತ್ತದೆ. ಇದೂ ಮೇವಿನ ಕೊರತೆಗೆ ಕಾರಣವಾಗುತ್ತಿದೆ ಎನ್ನಲಾಗಿದೆ.

    ಗಾಯದ ಮೇಲೆ ಬರೆ: ಜಿಲ್ಲೆಯಲ್ಲಿ ರೈತರ ಪ್ರಮುಖ ಆದಾಯ ಮೂಲವೆನಿಸಿರುವ ಹೈನುಗಾರರಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಎದುರಾಗಿದೆ. ಪ್ರಮುಖವಾಗಿ ರಾಸುಗಳಿಗೆ ಕಾಡಿದ ಚರ್ಮಗಂಟು ರೋಗದಿಂದ ಹಾಲಿನ ಉತ್ಪಾದನೆಯಲ್ಲಿ ಕುಸಿದ ಅನುಭವಿಸಿದ ರೈತರು ದುಬಾರಿ ದರದಲ್ಲಿ ಮೇವು ಒದಗಿಸಬೇಕಾದ ಅನಿವಾರ್ಯತೆ ಎದುರಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬ ವಾತಾವರಣ ಎದುರಾಗಿದೆ. ಇದರೊಂದಿಗೆ ಏರುತ್ತಿರುವ ಪಶು ಆಹಾರ ಬೆಲೆ, ಮೇವಿನ ದರ ಏರಿಕೆ, ಕಾಡುತ್ತಿರುವ ರೋಗಗಳು ಶೀತ ವಾತಾವರಣ ಮತ್ತಿತರ ಕಾರಣದಿಂದ ನಿರೀಕ್ಷಿತ ಆದಾಯ ದಕ್ಕಿಸಿಕೊಳ್ಳಲು ಹೈನುಗಾರರು ಪರದಾಡುವಂತಾಗಿದೆ.

    ಪ್ರಸ್ತುತ ಜಿಲ್ಲೆಯಲ್ಲಿ ರಾಸುಗಳ ಮೇವಿನ ಕೊರತೆ ಎದುರಾಗಿಲ್ಲ, ನಾಲ್ಕೈದು ತಿಂಗಳಿಗೆ ಬೇಕಾಗುವಷ್ಟು ಮೇವಿನ ಲಭ್ಯತೆ ಇದೆ. ಮುಂದೆ ಮಳೆಗಾಲ ಆರಂಭವಾಗಲಿದ್ದು ಒಣ ಹುಲ್ಲಿನ ಅವಲಂಬನೆ ತಗ್ಗಲಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಹೈನುಗಾರರ ಆತಂಕಪಡುವ ಅಗತ್ಯವಿಲ್ಲ. ಬೇಸಿಗೆಗೂ ಮುನ್ನ ಕೈಗೊಂಡ ಮುಂಜಾಗ್ರತಾ ಕ್ರಮದಿಂದ ಮೇವು ದಾಸ್ತಾನು ಇದೆ.
    ಡಾ.ನಾಗರಾಜ್, ಉಪನಿರ್ದೇಶಕ, ಪಶುಪಶುಪಾಲನಾ ಇಲಾಖೆ ಬೆಂ.ಗ್ರಾಮಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts