

ಕಾನಹೊಸಹಳ್ಳಿ: ಹಳ್ಳಿ ಜನ ಮಹಾನಗರ ಮತ್ತು ಕಾಫಿ ಸೀಮೆಗಳಿಗೆ ಉದ್ಯೋಗ ಅರಸಿ ಹೋಗುವ ಬದಲಾಗಿ ಸ್ಥಳೀಯವಾಗಿ ನರೇಗಾ ಯೋಜನೆಯಡಿ ಕೆಲಸ ಮಾಡಿ ಜೀವನ ಕಟ್ಟಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ತಿಳಿಸಿದರು.
ಗುಡೇಕೋಟೆ ಸಮೀಪ ಯರ್ರೋಬನಹಟ್ಟಿ, ಶ್ರೀಕಂಠಾಪುರ ಮತ್ತು ತಾಂಡದ ಜನರಿಗೆ ಸೋಮವಾರ ರಾಮಾಚಾರಿ ಕೆರೆಯಲ್ಲಿ ನರೇಗಾ ಯೋಜನೆಯಡಿ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶೇಷವಾಗಿ ತಾಂಡ ಜನರು ಮಂಡ್ಯ, ಮೈಸೂರು, ಹಾಸನ ಕಡೆ ಕಬ್ಬು ಕಟಾವು ಮಾಡಲು ತಮ್ಮ ಮಕ್ಕಳೊಂದಿಗೆ ತೆರಳುವ ರೂಢಿ ಹಲವು ವರ್ಷಗಳಿಂದ ಇಟ್ಟುಕೊಂಡಿದ್ದಾರೆ. ಈ ವರ್ಷ ಈ ಪದ್ಧತಿ ತಪ್ಪಿಸಿ ನರೇಗಾ ಯೋಜನೆಯಡಿ ಕೆಲಸ ನೀಡುವ ಮೂಲಕ ಗುಳೆ ಹೋಗುವುದನ್ನು ತಪ್ಪಿಸಲಾಗಿದೆ. ಮಕ್ಕಳನ್ನು ಕರೆದುಕೊಂಡು ಹೋಗುವುದರಿಂದ ಶಾಲೆಯಿಂದ ವಂಚಿತರಾಗುತ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಆರೋಗ್ಯ ತಪಾಸಣೆ
ಯೋಜನೆಯಡಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಕೂಲಿ ದೊರೆಯುವುದರ ಜತೆಗೆ ಕಾಮಗಾರಿ ಸ್ಥಳದಲ್ಲೇ ಆರೋಗ್ಯ ತಪಾಸಣೆ ಶಿಬಿರ ಸೇರಿ ನಾನಾ ಸೌಲಭ್ಯಗಳು ದೊರೆಯಲಿವೆ. ಕಾರ್ಮಿಕರು ನಿರ್ವಹಿಸುವ ಕೆಲಸಕ್ಕೆ ನಿಯಮಾನುಸಾರ ಅವರ ಬ್ಯಾಂಕ್ ಖಾತೆಗೆ ಕೂಲಿ ಪಾವತಿಸಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ನಿರ್ವಹಿಸುವ ಶ್ರಮಿಕರು ಆರೋಗ್ಯದ ಬಗ್ಗೆಯೂ ಜಾಗ್ರತೆವಹಿಸಬೇಕು ಎಂದರು.
ಗ್ರಾಪಂ ಸದಸ್ಯರಾದ ಪ್ರಭಾಕರ, ಸುನಿತಾ ತಿಪ್ಪೇಸ್ವಾಮಿ, ತಳವಾರ ಪ್ರಹ್ಲಾದ, ಸಣ್ಣಕ್ಕ ಮಲ್ಲಯ್ಯ, ಸರಿತಾಬಾಯಿ, ಮುರಳಿ ರಾಜ, ನರೇಗಾ ಜೆಇ ರಾಜಶೇಖರ, ಬಿಎಫ್‌ಟಿಗಳಾದ ಶೈಲಜಾ, ಭೀಮಾನಾಯ್ಕ, ರಾಮಾಂಜನೇಯ ಇತರರಿದ್ದರು.