

ಬೆಂಗಳೂರು: ವಿದ್ಯಾರ್ಥಿಗಳು ಶಿಕ್ಷಣವನ್ನು ಬರೀ ಜ್ಞಾನ ಪಡೆಯಲು ಸೀಮಿತ ಮಾಡಿಕೊಳ್ಳದೆ ಭವ್ಯ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವತ್ತ ಚಿತ್ತ ಹರಿಸಬೇಕು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ ) ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮನ್ ಸಲಹೆ ನೀಡಿದ್ದಾರೆ.
ದಯಾನಂದ್ ಸಾಗರ್ ವಿಶ್ವವಿದ್ಯಾಲಯ ನಗರದಲ್ಲಿ ಆಯೋಜಿಸಲಾಗಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಸಮುದಾಯ ಮುಂದಿನ ಹಂತಕ್ಕೆ ಕಾಲಿಡುತ್ತಿದ್ದು,ಸ್ಪರ್ಧಾತ್ಮಕ ಜಗತ್ತಿನಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಪ್ರಾಥಮಿಕವಾಗಿ ಸಂವಹನ ಕೌಶಲ ಬೆಳೆಸಿಕೊಳ್ಳಬೇಕು. ಪ್ರತಿ ಹಂತದಲ್ಲಿ ನಾವೀನ್ಯತೆ ಅಳವಡಿಸಿಕೊಳ್ಳಬೇಕು. ವಿವಿಯಲ್ಲಿ ಕಲಿಕೆಗೆ ಒದಗಿಸಲಾದ ಅತ್ಯಾಧುನಿಕ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಯಶಸ್ವಿಯಾಗಬೇಕು.ದಿನಗಳೆದಂತೆ ಕಲಿತ ವಿಚಾರಗಳು ಅಪ್ರಸ್ತುತವಾಗುತ್ತವೆ. ಇದನ್ನು ಮನಗಂಡು ಜಗತ್ತು ಏನು ಬಯಸುತ್ತದೆ ಎಂಬುದುನ್ನು ಅರಿತು ಸಾಗಬೇಕು. ಅಧಿಕಾರಯುತವಾದ ಆಲೋಚನೆ ಮತ್ತು ಆಲೋಚನೆಯಲ್ಲಿ ನಿಯಂತ್ರಣ ಹೊಂದಬೇಕು.ಎಐಸಿಟಿಇ ಶಿಕ್ಷಣದ ಬಗ್ಗೆ ನಿಯಂತ್ರಣ ಹೊಂದಿದ್ದು,ಇದಕ್ಕೆ ತಕ್ಕಂತೆ ಶಿಕ್ಷಣ ಸಂಸ್ಥೆಗಳು ಸೌಭಲ್ಯ ಕಲ್ಪಿಸುತ್ತಿರುವುದು ಗಮನಾರ್ಹ ಬೆಳವಣಿಗೆ ಎಂದರು.
ವಿಶ್ವದಲ್ಲೇ ಅತಿ ದೊಡ್ಡ ಅರ್ಥವ್ಯವಸ್ಥೆ ರಾಷ್ಟ್ರವಾಗಿ ರೂಪಿಸುವ ಜವಾಬ್ದಾರಿ ವಿದ್ಯಾರ್ಥಿ ಸಮುದಾಯ ಮೇಲಿದೆ. ಭಾರತ ಇದೀಗ ಜಗತ್ತಿನ ಆರೋಗ್ಯ ಪ್ರವಾಸಿ ತಾಣವಾಗಿ ಪರಿವರ್ತನೆಯಾಗುತ್ತಿದ್ದು, ಎಲ್ಲ ವಲಯದಿಂದ ಅವಕಾಶ ಬರುತ್ತಿವೆ. ಹೀಗಾಗಿ,ಪ್ರತಿಯೊಬ್ಬ ವಿದ್ಯಾರ್ಥಿ ಉತ್ಕೃಷ್ಟತೆ ಬೆಳೆಸಿಕೊಳ್ಳಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಎಂ.ಕೆ.ರಮೇಶ್ ಕರೆ ನೀಡಿದರು. ದಯಾನಂದ ಸಾಗರ್ ಶಿಕ್ಷಣ ಸಂಸ್ಥೆಯ ಡಾ.ಹೇಮಚಂದ್ರ ಸಾಗರ್, ಜಂಟಿ ಕಾರ್ಯದಶಿರಾದ ನಿಶಾಂತ್ ಎಚ್.ಸಾಗರ್, ರೋಹನ್ ಪ್ರೇಮ್ ಸಾಗರ್ ಮತ್ತಿತರರಿದ್ದರು.