

ಚೆನ್ನೈ: ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ 70 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಕೇವಲ ಜಯ ಮಾತ್ರ ಇರಲಿಲ್ಲ ಜತೆಗೆ ಹೊಸ ದಾಖಲೆ ಕೂಡ ನಿರ್ಮಾಣವಾಯಿತು.
ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ತಮ್ಮದೇ ನೂತನ ರೆಕಾರ್ಡ್ ಅನ್ನು ಬರೆದರು. ಶತಕಗಳ ಸರದಾರ ಎಂಬ ಪಟ್ಟವನ್ನು ಗಳಿಸಿದರು. ಸೆಮಿಫೈನಲ್ ಪಂದ್ಯ ವೀಕ್ಷಿಸಲು ಮುಂಬೈಗೆ ಆಗಮಿಸಿದ್ದ ಸೂಪರ್ಸ್ಟಾರ್ ರಜನಿಕಾಂತ್, ಭಾರತ ತಂಡದ ಗೆಲುವಿನ ನಂತರ ಭರವಸೆಯೊಂದನ್ನು ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್ ತಂಡಕ್ಕೆ 397 ಬೃಹತ್ ಗುರಿಯನ್ನು ಚೇಸ್ ಮಾಡಲು ನೀಡಿದ ಭಾರತ, ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಈ ರೋಚಕ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದ ಅನೇಕ ಸ್ಟಾರ್ ಕಲಾವಿದರ ಪೈಕಿ ತಮಿಳು ಚಿತ್ರರಂಗದ ತಲೈವಾ ರಜನಿಕಾಂತ್ ಪ್ರಮುಖರಾಗಿದ್ದರು. ಸಂಪೂರ್ಣ ಪಂದ್ಯವನ್ನು ನೋಡಿದ ರಜನಿ, ಚೆನ್ನೈಗೆ ಹಿಂತಿರುಗಿದ ಬಳಿಕ ಟೀಮ್ ಇಂಡಿಯಾದ ಗೆಲುವನ್ನು ಕೊಂಡಾಡಿದ್ದಾರೆ.
"ಮೊದಲಿಗೆ ನನಗೆ ಭಯವಾಗಿತ್ತು. ನಂತರ, ವಿಕೆಟ್ಗಳು ಬೀಳುತ್ತಲೇ ಇದ್ದಾಗ, ಸಮಾಧಾನವಾಯಿತು. ಆ ಒಂದೂವರೆ ಗಂಟೆಯಲ್ಲಿ, ನಾನು ಸಾಕಷ್ಟು ಆತಂಕಗೊಂಡಿದ್ದೆ. ಈ ವಿಶ್ವಕಪ್ ನಮ್ಮದೇ ಎಂದು ನನಗೆ 100% ಗ್ಯಾರಂಟಿಯಿದೆ" ಎಂದು ನಟ ರಜನಿಕಾಂತ್ ಭರವಸೆ ವ್ಯಕ್ತಪಡಿಸಿದರು. ಸದ್ಯ ರಜನಿ ಅವರ ಈ ಹೇಳಿಕೆ ಇದೀಗ ನೆಟ್ಟಿಗರ ಗಮನಸೆಳೆದಿದ್ದು, ನಿಮ್ಮ ಮಾತಿನಂತೆಯೇ ಆಗಲಿ ಎಂದು ಆಶಿಸಿದ್ದಾರೆ,(ಏಜೆನ್ಸೀಸ್).