ಧಾರವಾಡದಲ್ಲಿ ಎಫ್​ಎಂಸಿಜಿ ಕ್ಲಸ್ಟರ್ | 15,000 ಕೋಟಿ ರೂಪಾಯಿ ಹೂಡಿಕೆಗೆ ಅನುಮತಿ

BSY JPG
Published on

ಬೆಂಗಳೂರು: ರಾಜ್ಯದಲ್ಲಿ ಎಫ್​ಎಂಸಿಜಿ (ಫಾಸ್ಟ್ ಮೂವಿಂಗ್ ಕನ್​ಸ್ಯೂಮರ್ ಗೂಡ್ಸ್) ಕ್ಲಸ್ಟರ್ ಆರಂಭಿಸುವುದು ಸೇರಿ 15 ಸಾವಿರ ಕೋಟಿ ರೂ.ಗೆ ಸಂಬಂಧಿಸಿದ ಐದು ಹೂಡಿಕೆಗೆ ಸಿಎಂ ನೇತೃತ್ವದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ 54ನೇ ಸಭೆ ಅನುಮತಿಸಿತು.

ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಇದೇ ವೇಳೆ ಧಾರವಾಡದಲ್ಲಿ ಎಫ್​ಎಂಸಿಜಿ ಕ್ಲಸ್ಟರ್ ಸ್ಥಾಪಿಸಿ ಆ ಕ್ಷೇತ್ರದ ಹೂಡಿಕೆದಾರರನ್ನು ಸೆಳೆಯಲು ನಿರ್ಣಯಿಸಿತು. ಉತ್ತರ ಕರ್ನಾಟಕ ಭಾಗದಲ್ಲಿ ಎಫ್​ಎಂಸಿಜಿ ಕ್ಲಸ್ಟರ್ ಸ್ಥಾಪನೆಯಾಗಿ ಹತ್ತು ಹಲವು ಕಂಪನಿಗಳು ಬಂದರೆ ಉದ್ಯೋಗ ಸೃಷ್ಟಿಯಾಗಲಿದೆ. ಮೂರು ವರ್ಷದವರೆಗೆ ಯಾವುದೇ ಅನುಮತಿ ಇಲ್ಲದೆ ಇಲ್ಲಿ ಕೈಗಾರಿಕೆ ಆರಂಭಿಸಲು ಇರುವ ಅವಕಾಶ ಬಳಸಿಕೊಂಡು ಹೂಡಿಕೆದಾರರು ಮುಂದಾದರೆ ತಕ್ಷಣವೇ ಉತ್ತರ ಕರ್ನಾಟಕ ಭಾಗದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕೊಟ್ಟಂತಾಗುತ್ತದೆ, ವಲಸೆಯನ್ನೂ ತಡೆಯಬಹುದೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಎಲ್​ಎಂಟಿಯ ಒಂದು ಯೋಜನೆ ಅನುಷ್ಠಾನಕ್ಕೂ ಇದೇ ವೇಳೆ ಸಮಿತಿ ಒಪ್ಪಿಗೆ ನೀಡಿತು. ಹೂಡಿಕೆದಾರರನ್ನು ಕರೆತರಲು ಹೆಚ್ಚಿನ ಆದ್ಯತೆ ನೀಡಬೇಕಿದೆ. ಬೇರೆ ಎಲ್ಲ ರಾಜ್ಯಕ್ಕಿಂತ ನಮ್ಮಲ್ಲಿ ಕೈಗಾರಿಕೆ ಸ್ನೇಹಿ ವಾತಾವರಣವಿದೆ. ನಾವು ಕೊಡುವ ರಿಯಾಯಿತಿ ಹೊರತುಪಡಿಸಿ ಇನ್ನೂ ಬೇರೆ ಕೋರಿಕೆಗಳಿದ್ದರೆ ಅದರ ಬಗ್ಗೆಯೂ ರ್ಚಚಿಸೋಣ, ಹೂಡಿಕೆದಾರರನ್ನು ಕರೆತರಲು ಆದ್ಯತೆ ನೀಡಿ ಎಂದು ಸಿಎಂ ಯಡಿಯೂರಪ್ಪ ಹಾಗೂ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net