

ನವದೆಹಲಿ: ಸ್ವದೇಶಿ ನಿರ್ಮಿತ 400 ಕಿ.ಮೀ. ದೂರದವರೆಗಿನ ಗುರಿ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದ ವಿಸ್ತರಿತ ವ್ಯಾಪ್ತಿಯ ಸೂಪರ್ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ಬುಧವಾರ ಯಶಸ್ವಿಯಾಗಿ ಉಡಾಯಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಪಿಜೆ-10 ಯೋಜನೆಯಡಿ ಈ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು. ಓಡಿಶಾದಲ್ಲಿರುವ ಕೇಂದ್ರದಿಂದ ಕ್ಷಿಪಣಿಯನ್ನು ದೇಶೀಯ ಬೂಸ್ಟರ್ ಮೂಲಕ ಉಡಾಯಿಸಲಾಗಿದೆ. ಕ್ಷಿಪಣಿ ಉಡಾವಣೆ ಯಶಸ್ವಿಯಾಗಿರುವುದಕ್ಕೆ ಡಿಆರ್ಡಿಒ ಅಧ್ಯಕ್ಷ ಡಾ. ಜಿ. ಸತೀಶ್ ರೆಡ್ಡಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಸೂಪರ್ಸಾನಿಕ್ ಕ್ರೂಯಿಸ್ ಕ್ಷಿಪಣಿಗೆ ಇನ್ನಷ್ಟು ದೇಶೀಯ ಅಂಶಗಳ ಸೇರ್ಪಡೆಗೆ ಇದರಿಂದ ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ. ಇದು ವಿಸ್ತರಿತ ವ್ಯಾಪ್ತಿಯ ಕ್ಷಿಪಣಿಯ ಎರಡನೇ ಪರೀಕ್ಷೆಯಾಗಿದೆ. ಈ ಕ್ಷಿಪಣಿಯಲ್ಲಿ ದೇಶೀಯವಾಗಿ ಅಭಿವೃಧಿಪಡಿಸಲಾದ ಏರ್ಫ್ರೇಮ್ ಮತ್ತು ಬೂಸ್ಟರ್ಗಳಿವೆ. ಡಿಆರ್ಡಿಒ ಮತ್ತು ರಷ್ಯಾದ ಎನ್ಪಿಒ ಮಷಿನೊಸ್ತ್ರೊಯೆನಿಯಾ (ಎನ್ಪಿಎಂಒ) ಜಂಟಿಯಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿವೆ.
ಎಲ್ಲಿಂದ ಉಡಾಯಿಸಬಹುದು?: ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಯಿಸ್ ಕ್ಷಿಪಣಿಯಾಗಿದೆ. ಅದನ್ನು ಜಲಾಂತರ್ಗಾಮಿಗಳು, ಸಮರ ನೌಕೆಗಳು ಮತ್ತು ಯುದ್ಧ ವಿಮಾನಗಳಿಂದ ಉಡಾಯಿಸಬಹುದಾಗಿದೆ. ಭೂಮಿಯಿಂದಲೂ ಉಡಾಯಿಸಬಹುದು.