ಬೆಂಗಳೂರಿನ ಟ್ರಾಫಿಕ್​ ಸಮಸ್ಯೆ ಪರಿಹರಿಸಲಿವೆ ಹಾರುವ ಬಸ್​ಗಳು! ಇದರ ವಿಶೇಷತೆ ನಿಮ್ಮ ಹುಬ್ಬೇರಿಸುತ್ತೆ! Flying Buses

Flying Buses
Published on

Flying Buses : ಜಗತ್ತಿನಲ್ಲಿರುವ ಅತಿ ದೊಡ್ಡ ಸಮಸ್ಯೆ ಎಂದರೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ. ಟ್ರಾಫಿಕ್​ ಜಾಮ್​ ನಿರ್ವಹಿಸಲು ವಿವಿಧ ಮಾರ್ಗಗಳನ್ನು ಹುಡುಕುತ್ತಿದ್ದರು ಕೂಡ ಅನೇಕ ದೇಶಗಳು ಇನ್ನೂ ಶಾಶ್ವತ ಪರಿಹಾರ ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಈ ಟ್ರಾಫಿಕ್​ ಕಿರಿಕಿರಿಯಿಂದ ಗಂಟೆಗಟ್ಟಲೇ ರಸ್ತೆಯಲ್ಲೇ ಸಮಯ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಅಂದುಕೊಂಡ ಸಮಯಕ್ಕೆ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಇದೇ ಪರಿಸ್ಥಿತಿ ಇರುವಾಗ ನಮ್ಮ ದೇಶದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ.‘

ಅಮೆರಿಕ ಸೇರಿದಂತೆ ಕೆಲವು ಅಭಿವೃದ್ಧಿ ಹೊಂದಿದ ದೇಶಗಳು ಸಾರ್ವಜನಿಕ ಸಾರಿಗೆಗೆ ಪ್ರಾಮುಖ್ಯತೆ ನೀಡುವ ಮೂಲಕ ಸಂಚಾರ ಸಮಸ್ಯೆಯಿಂದ ಮುಕ್ತಿ ಪಡೆಯಲು ಪ್ರಯತ್ನಿಸುತ್ತಿವೆ. ಗಮನಾರ್ಹ ಸಂಗತಿ ಏನೆಂದರೆ, ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿ ಸಹ ಆಗಿವೆ. ಆದರೆ, ಭಾರತೀಯರು ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ. ಅವರು ತಮ್ಮ ಸ್ವಂತ ವಾಹನಗಳಲ್ಲಿ ಹೋಗಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದರ ಪರಿಣಾಮ ಟ್ರಾಫಿಕ್ ಜಾಮ್ ಮತ್ತು ಮಾಲಿನ್ಯ ಹೆಚ್ಚಾಗುತ್ತಿದೆ.

ನಮ್ಮ ದೇಶವು ವಾರ್ಷಿಕವಾಗಿ 22 ಲಕ್ಷ ಕೋಟಿ ರೂ. ಮೌಲ್ಯದ ಪಳೆಯುಳಿಕೆ ಇಂಧನಗಳನ್ನು ಆಮದು ಮಾಡಿಕೊಳ್ಳುತ್ತದೆ ಎಂದು ವರದಿಗಳು ಸೂಚಿಸುತ್ತವೆ. ಈ ಎಲ್ಲ ಇಂಧನವನ್ನು ಸುಟ್ಟಾಗ ಎಷ್ಟು ವಾಯು ಮಾಲಿನ್ಯ ಸಂಭವಿಸುತ್ತದೆ ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ. ನಿಜಕ್ಕೂ ಭಯಾನಕ.

ಇನ್ನು ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಪರಿಹರಿಸಲು ಏರಿಯಲ್ ಪಾಡ್ ಟ್ಯಾಕ್ಸಿಗಳು ಅಥವಾ "ಹಾರುವ ಬಸ್‌ಗಳು" ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಬೆಂಗಳೂರು ನಗರದಲ್ಲಿ ಸಂಚಾರ ಸಮಸ್ಯೆಗೆ ಪರಿಹಾರವಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಸ್ತಾಪಿಸುತ್ತಿರುವ ವಿಚಾರವಿದು. ಚಾನೆಲ್‌ ಒಂದರಲ್ಲಿ ನಡೆದ ಚರ್ಚೆಯಲ್ಲಿ ಸಚಿವರು ಈ ಹೊಸ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಹಾರುವ ಬಸ್‌ಗಳು ಎಂಬ ಪದ ಕೇಳಿದ ಕೂಡಲೇ ಸಣ್ಣ ವಿಮಾನಗಳು ಅಥವಾ ಹೆಲಿಕಾಪ್ಟರ್‌ಗಳ ಬಗ್ಗೆ ಯೋಚಿಸಬೇಡಿ. ಏಕೆಂದರೆ, ಹಾರುವ ಬಸ್​ ಆ ರೀತಿ ಇರುವುದಿಲ್ಲ. ಹೇಳಬೇಕೆಂದರೆ, ಬಸ್‌ಗಳ ರೂಪದಲ್ಲೂ ಇರುವುದಿಲ್ಲ. ಅವು ಮೆಟ್ರೋ ರೈಲುಗಳ ಬೋಗಿಗಳಿಗೆ ಸ್ವಲ್ಪ ಹೋಲಿಕೆಯನ್ನು ಹೊಂದಿರುತ್ತವೆ. ಮೆಟ್ರೋ ನಗರಗಳಲ್ಲಿ ಎಲಿವೇಟೆಡ್ ಏರ್-ಪಾಡ್ ಆಧಾರಿತ ವ್ಯವಸ್ಥೆಗಳು ಮತ್ತು ಫ್ಲ್ಯಾಷ್-ಚಾರ್ಜಿಂಗ್ ಎಲೆಕ್ಟ್ರಿಕ್ ಬಸ್‌ಗಳಂತಹ ಹೊಸ ಸಾರಿಗೆ ವಿಧಾನಗಳನ್ನು ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆಗಳನ್ನು ಪ್ರಾರಂಭಿಸಿದೆ.

ಈ ಬಗ್ಗೆ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, 2014ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದರು. ದೆಹಲಿ, ಪುಣೆ ಮತ್ತು ಬೆಂಗಳೂರಿನಂತಹ ನಗರಗಳ ಜನರು ಈಗಾಗಲೇ ತೀವ್ರ ಸಂಚಾರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕಾರಣದಿಂದಾಗಿ, ವೇಗ ಮತ್ತು ಪರಿಸರ ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುವ ಪರ್ಯಾಯಗಳನ್ನು ಮಾಡುತ್ತಿದ್ದೇವೆ ಎಂದರು.

ಭಾರತೀಯ ಜನರು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುತ್ತಿಲ್ಲ. ಏಕೆಂದರೆ, ಸಾಕಷ್ಟು ಸೌಕರ್ಯವನ್ನು ಬಯಸುತ್ತಿದ್ದಾರೆ. ಜನರು ಆರಾಮದಾಯಕವಾಗಿರಲು ಬಯಸುತ್ತಾರೆ. ಹೀಗಾಗಿ, ದೆಹಲಿ ಮತ್ತು ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಶೀಘ್ರದಲ್ಲೇ ಹಾರುವ ಬಸ್‌ಗಳು ಲಭ್ಯವಾಗಲಿವೆ. ಇವು ಎತ್ತರದ ಹಳಿಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರಹಿತ ವಿದ್ಯುತ್ ಪಾಡ್‌ಗಳಾಗಿವೆ. ಪ್ರತಿಯೊಂದೂ ಬಸ್​ 135 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದರು.

ಸಂಪೂರ್ಣ ಹವಾನಿಯಂತ್ರಿತ ವಾಹನವು ಗಗನಸಖಿಯರಂತೆ ಪ್ರಯಾಣಿಕರಿಗೆ ಸಹಾಯ ಮಾಡಲು ಬಸ್ ಹೊಸ್ಟೆಸ್‌ಗಳನ್ನು ಹೊಂದಿರುತ್ತದೆ. ಪ್ರಯಾಣಿಕರಿಗೆ ಚಹಾ ಮತ್ತು ಕಾಫಿ ಕೂಡ ಲಭ್ಯವಿರುತ್ತದೆ. ಇದು ವಿದ್ಯುತ್‌ನಿಂದ ಚಲಿಸುತ್ತದೆ. ಬಸ್ ಕೆಲವು ನಿಲ್ದಾಣಗಳಲ್ಲಿ ನಿಂತಾಗ, ಅಲ್ಲಿ ಸ್ಥಾಪಿಸಲಾದ ಚಾರ್ಜಿಂಗ್ ವ್ಯವಸ್ಥೆಯಿಂದ ಬ್ಯಾಟರಿಯನ್ನು ಚಾರ್ಜ್ ಮಾಡಲಾಗುತ್ತದೆ. ಇದು ವೇಗವಾಗಿ ಚಾರ್ಜ್ ಆಗುವುದರಿಂದ, ಚಾರ್ಜ್ ಮಾಡಲು ಬಹಳ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಒಮ್ಮೆ ಚಾರ್ಜ್​ ಆದರೆ, ಸುಮಾರು 40 ಕಿಲೋಮೀಟರ್‌ಗಳವರೆಗೆ ಚಲಿಸುತ್ತದೆ ಎಂದು ಗಡ್ಕರಿ ಹೇಳಿದರು.

ಸಂಚಾರ ಸಮಸ್ಯೆಯನ್ನು ಪರಿಹರಿಸಲು ಅಮೆರಿಕ, ಯುರೋಪಿಯನ್ ದೇಶಗಳು ಮತ್ತು ರಷ್ಯಾದಿಂದ ಹಾರುವ ಬಸ್‌ಗಳು ಸೇರಿದಂತೆ ಹಲವಾರು ತಂತ್ರಜ್ಞಾನಗಳನ್ನು ಸ್ವೀಕರಿಸಲಾಗಿದೆ ಮತ್ತು ಅವು ಲಾಭದಾಯಕವೇ ಎಂಬುದನ್ನು ಪರಿಶೀಲಿಸಿದ ನಂತರ ಅವುಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ನಿತಿನ್​ ಗಡ್ಕರಿ ಸ್ಪಷ್ಟಪಡಿಸಿದರು. ಆದರೆ, ಇದು ಯಾವಾಗ ಸಂಭವಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net