

ಅರಕಲಗೂಡು: ಮುಂಗಾರು ಮಳೆ ಅಬ್ಬರಕ್ಕೆ ಕಾವೇರಿ ದಿನೇ ದಿನೆ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ತಗ್ಗು ಪ್ರದೇಶದ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತವಾಗುತ್ತಿದ್ದು ರೈತರು ಕಂಗಾಲಾಗಿದ್ದಾರೆ.
ಕೆಲ ದಿನಗಳಿಂದ ಎಡಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ನೂರಾರು ಎಕರೆಯಲ್ಲಿ ಬೆಳೆಗಳು ನೀರಿನಲ್ಲಿ ಮುಳುಗಿವೆ. ತಂಬಾಕು, ಮುಸುಕಿನ ಜೋಳ, ಆಲೂಗಡ್ಡೆ ಬೆಳವಣಿಗೆ ಹಂತದಲ್ಲಿದ್ದು ಅತಿಯಾದ ಮಳೆಯಿಂದ ಕೊಳೆಯುವಂತಾಗಿದೆ.
ಕೊಣನೂರು ಹಾಗೂ ರಾಮನಾಥಪುರ ಹೋಬಳಿ ಭಾಗದ ಕಟ್ಟೇಪುರ ನಾಲಾ ವ್ಯಾಪ್ತಿಯಲ್ಲಿ ಬೆಳೆದಿದ್ದ ಹೊಗೆಸೊಪ್ಪು ಬೆಳೆ ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿದೆ. ಕಳೆದ ವರ್ಷ ತಂಬಾಕಿಗೆ ಉತ್ತಮ ಬೆಲೆ ದೊರೆತ ಸಂತಸದಲ್ಲಿದ್ದ ರೈತರು ಈ ಬಾರಿ ಹೆಚ್ಚಿನ ಬೆಳೆ ಬೆಳೆದಿದ್ದರು. ಇನ್ನೇನು ಎಲೆಗಳನ್ನು ಕಟಾವು ನಡೆಸಿ ಹೊಗೆಸೊಪ್ಪು ಹದಗೊಳಿಸಬೇಕೆನ್ನುವ ಸಮಯಕ್ಕೆ ಮಳೆ ಶಾಪವಾಗಿ ಪರಿಣಮಿಸಿದೆ.
ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಬೆಳೆದ ತಂಬಾಕು ಬೆಳೆ ಕಾವೇರಿ ನದಿ ಪ್ರವಾಹಕ್ಕೆ ಮುಳುಗಿರುವುದನ್ನು ಕಂಡು ಬೆಳೆಗಾರರು ಕಣ್ಣೀರಿಡುವಂತಾಗಿದೆ. ಕೆಲವೆಡೆ ರೈತರು ನೀರಿನಲ್ಲಿ ಮುಳುಗುತ್ತಿರುವ ತಂಬಾಕು ಎಲೆಗಳನ್ನು ನೀರಿಗಿಳಿದು ಕಟಾವು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲ ರೈತರು ಪ್ರವಾಹ ಹೆಚ್ಚಾಗಬಹುದೆಂದು ಹೊಗೆಸೊಪ್ಪು ಗಿಡಗಳನ್ನೇ ಕಿತ್ತು ಎಲೆಗಳನ್ನು ಕಟಾವು ಮಾಡಿಕೊಳ್ಳುತ್ತಿದ್ದಾರೆ.
ಹೊಗೆಸೊಪ್ಪು ಗಿಡಗಳು ಇನ್ನೂ ಸರಿಯಾಗಿ ಕಟಾವಿಗೆ ಬಂದಿರಲಿಲ್ಲ. ಇನ್ನಷ್ಟು ಬೆಳವಣಿಗೆ ಕಂಡು ಇಳುವರಿ ಅಧಿಕ ಪ್ರಮಾಣದಲ್ಲಿ ಸಿಗುತ್ತಿತ್ತು. ಬೆಳೆಗಾಗಿ ರಸಗೊಬ್ಬರ ನೀಡಿ ಸಾಕಷ್ಟು ಖರ್ಚು ಮಾಡಿಕೊಂಡಿದ್ದೇವೆ. ಈಗ ದುತ್ತನೆ ಪ್ರವಾಹ ಬಂದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅಳಿದುಳಿದ ಎಲೆಗಳನ್ನು ಕಟಾವು ಮಾಡಿ ಗಿಡ ಸಮೇತ ಕಿತ್ತು ಮನೆಗೆ ಸಾಗಿಸುತ್ತಿದ್ದೇವೆ. ಬೆಳೆದ ಬೆಳೆ ನೀರಿನಲ್ಲಿ ಮುಳುಗಿ ನಾಶವಾಗಿದೆ. ಬೆಳೆ ಕಳೆದುಕೊಂಡು ನಮ್ಮ ಬದುಕು ಪ್ರವಾಹದ ಸಂಕಷ್ಟದಲ್ಲಿ ಮುಳುಗಿದೆ ಎಂದು ಬೆಳೆಗಾರರು ಅಲವತ್ತುಕೊಂಡಿದ್ದಾರೆ.