ಮಳೆಗಾಲಕ್ಕೂ ಮುನ್ನವೇ ಮನೆಗೆ ನುಗ್ಗಿದ ನೀರು

Bhatkal-Rain
Published on

ಭಟ್ಕಳ: ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಮಳೆ ಹಲವು ಆವಾಂತರಗಳನ್ನು ಸೃಷ್ಟಿಸಿದ್ದು ಮೊದಲ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ನೀರು ಮೆಯೊಳಗೆ ನುಗ್ಗಿ ಮನೆಯವರು ಹರಸಾಹಸ ಪಡುವಂತಾಯಿತು.
ಭಟ್ಕಳದಲ್ಲಿ ಗುಡುಗು, ಮಿಂಚು ಸಹಿತ ಒಂದು ಮಂಗಳವಾರ ಸಂಜೆ 2 ಗಂಟೆಗೂ ಅಧಿಕ ಕಾಲ ಭರ್ಜರಿ ಮಳೆ ಸುರಿದಿದೆ. ಮನೆಗಳೊಳಗೆ ನುಗ್ಗಿದ ಮಳೆ ನೀರು ಅಪಾರ ಹಾನಿ ಉಂಟುಮಾಡಿದೆ. ಮಧ್ಯಾಹ್ನದಿಂದ ತಾಲೂಕಿನಾದ್ಯಂತ ಜಿಟಿಜಿಟಿಯಾಗಿ ಮಳೆ ಜಿನುಗಲು ಆರಂಭವಾಗಿತ್ತು. ಬಳಿಕ ಸಂಜೆ ವೇಳೆಗೆ ಗುಡುಗು ಮಿಂಚು ಸಹಿತ ಕಾಲ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಭಟ್ಕಳ ಶಂಸುದ್ದಿನ್ ಸರ್ಕಲ್ ಸಮೀಪ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂದಿನಂತೆ ನೀರು ನಿಂತಿತ್ತು.

ಅವೈಜ್ಞಾನಿಕ ಒಳ ಚರಂಡಿ ಕಾಮಗಾರಿಯ ಹಿನ್ನೆಲೆಯಲ್ಲಿ ಭಟ್ಕಳ ಹನುಮಾನ್ ನಗರದ ದಿಗಂಬರ್ ಶೇಟ್ ಹಾಗೂ ಮಗ್ದುಂ ಕಾಲೋನಿಯ ಮನೆಗಳೊಳಗೆ ನುಗ್ಗಿದ ಮಳೆ ನೀರು ತೊಂದರೆ ಉಂಟುಮಾಡಿದೆ. ಅಕ್ಕಿ, ಬಟ್ಟೆ ಹಾಗೂ ಇತರ ವಸ್ತುಗಳು ಒದ್ದೆಯಾಗಿ ಹಾನಿ ಉಂಟಾಗಿದೆ. ಚರಂಡಿಯ ಕೆಸರು ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಮನೆಯ ಸ್ವಚ್ಛತೆಗೆ ನಿವಾಸಿಗಳು ಹರಸಾಹಸ ಪಡಬೇಕಾಯಿತು.ಮನೆಯಲ್ಲಿ ನೀರು ನುಗ್ಗಿದ ವೇಳೆ ಪುಟ್ಟ ಕಂದಮ್ಮನನ್ನು ಕುರ್ಚಿಯ ಮೇಲೆ ಕುಳ್ಳರಿಸಿ ಮನೆಯ ಸಾಮಗ್ರಿಗಳನ್ನು ನೀರಿನಿಂದ ರಕ್ಷಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಎಲ್ಲರ ಮನಕಲುಕುವಂತಿತ್ತು.

ಕಳೆದ ವರ್ಷ ಕೂಡ ಮಳೆಗಾಲದಲ್ಲಿ ಭಟ್ಕಳ ತಾಲೂಕು ನಲುಗಿತ್ತು. ಇಂದು ಕೇವಲ ಎರಡು ಗಂಟೆ ಸುರಿದ ಮೊದಲ ಮಳೆಗೆ ಈ ರೀತಿ ಅವಾಂತರ ನಡೆದಿದೆ. ಮುಂದೆ ಬರುವ ಮಳೆಗೆ ತಾಲೂಕು ಆಡಳಿತ ಹಾಗೂ ಪುರಸಭೆ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ತಾಲೂಕಿನ ಯಲ್ವಡಿಕವೂರ ರಸ್ತೆಯಲ್ಲಿ ಮರವೊಂದು ಮುರಿದು ಬಿದ್ದಿದೆ. ಜತೆಗೆ ವಿದ್ಯುತ್ ತಂತಿ ಕೂಡ ತುಂಡಾಗಿ ರಸ್ತೆ ಮೇಲೆ ಬಿದ್ದಿದೆ. ಇದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಎರಡೂ ಬದಿಯಲ್ಲಿ 20ಕ್ಕೂ ಹೆಚ್ಚು ವಾಹನಗಳು ನಿಂತಿದ್ದು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net