ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ತೆಂಗೇರಿ ರಾಜೀನಾಮೆ

tengeri
Published on

ಹೊನ್ನಾವರ: ಅಧಿಕಾರಕ್ಕೆ ಬಂದ ಮೇಲೆ ಪಕ್ಷ ಸಂಘಟಿಸಿದವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜಗದೀಪ ತೆಂಗೇರಿ ರಾಜೀನಾಮೆ ಸಲ್ಲಿಸಿದ್ದಾರೆ.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ 33ನೇ ಪುಣ್ಯತಿಥಿ ಕಾರ್ಯಕ್ರಮ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಜಿಲ್ಲೆಯ ಕಾಂಗ್ರೆಸ್ ಮುಖಂಡರ ನಡವಳಿಕೆಗೆ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದರು.

‘ಕಳೆದ ಕೆಲವು ತಿಂಗಳ ಹಿಂದೆ ಯಾವುದಾದರೂ ಸರ್ಕಾರಿ ನಾಮನಿರ್ದೆಶನಕ್ಕೆ ಅರ್ಜಿ ಸಲ್ಲಿಸುವಂತೆ ಪಕ್ಷ ಸೂಚಿಸಿತ್ತು. ಅದರಂತೆ ಪಕ್ಷದ ಹಿರಿಯ ಮುಖಂಡರೊಬ್ಬರ ಹೆಸರನ್ನು ರಾಜ್ಯ ಸಮಿತಿಗೆ ಮತ್ತು ನನ್ನ ಹೆಸರನ್ನು ಜಿಲ್ಲಾ ಕೆಡಿಪಿ ಸದಸ್ಯತ್ವಕ್ಕೆ ವಿನಂತಿಸಿದ್ದೆ. ಯಾವುದೇ ವಿಶೇಷ ಸೌಲತ್ತು ಇರದ ಈ ಸಮಿತಿಯಲ್ಲಿ ಸೇರಿದರೆ ಪಕ್ಷದ ಶಾಸಕರಿಲ್ಲದ ನಮ್ಮ ಭಾಗದಲ್ಲಿ ಕಾರ್ಯಕರ್ತರ ಸಮಸ್ಯೆಯನ್ನು ಮೂರು ತಿಂಗಳಿಗೊಮ್ಮೆ ನಡೆಯುವ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಸ್ಥರ ಗಮನ ಸೆಳೆಯಬಹುದು ಅನ್ನುವುದು ಉದ್ದೇಶವಾಗಿತ್ತು. ಆದರೆ ಪಕ್ಷಕ್ಕಾಗಿ 40 ವರ್ಷ ದುಡಿದ ನನ್ನ ಹೆಸರನ್ನು ಕೈ ಬಿಟ್ಟು, ನಮ್ಮ ಭಾಗದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯರಲ್ಲದವರನ್ನು ಕೆಡಿಪಿ ಸದಸ್ಯರನ್ನಾಗಿ ಮಾಡಿದ್ದಾರೆ. ನನಗಿಂತ ಹಿರಿಯರನ್ನು ನೇಮಿಸಿದ್ದರೆ ಅಭ್ಯಂತರವಿರಲಿಲ್ಲ. ಇನ್ನೊಬ್ಬರ ನೇಮಕ ಮಾಡುವಾಗ ಸೌಜನ್ಯಕ್ಕೂ ನನ್ನ ಬಳಿ ಯಾರೂ ಚರ್ಚಿಸಿಲ್ಲ’ ಎಂದು ಜಗದೀಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಉಪಾಧ್ಯಕ್ಷ ದಾಮೋದರ ನಾಯ್ಕ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಚಂದ್ರ ನಾಯ್ಕ, ಬ್ಲಾಕ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕುಪ್ಪು ಗೌಡ, ಬ್ಲಾಕ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯ್ಯಿ ಶೇಖ, ಇಂಟೆಕ್ ಜಿಲ್ಲಾ ಕಾರ್ಯದರ್ಶಿ ಕೇಶವ ಮೇಸ್ತ, ಸಾಮಾಜಿಕ ಜಾಲತಾಣದ ಬ್ಲಾಕ್ ಅಧ್ಯಕ್ಷ ರಾಮಕೃಷ್ಣ ನಾಯ್ಕ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಬ್ಲಾಕ ಕಾರ್ಯದರ್ಶಿ ಶ್ರೀಕಾಂತ ಮೇಸ್ತ, ಬಿಸಿಸಿ ಕಾರ್ಯದರ್ಶಿ ಜ್ಯೋತಿ ಮಹಾಲೆ, ಸುಧಾ ನಾಯ್ಕ, ಸಂತೋಷ ಮೇಸ್ತ, ಗಣೇಶ ಆಚಾರಿ, ಮಂಜು ಮುಕ್ರಿ, ಲಾರ‌್ಸನ್ ರೊಡ್ರಗಿಸ್, ವಾಸುದೇವ ಪುಲ್ಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net