

ಮಂಗಳೂರು: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೈತುರ್ಲಿ ತಿರುವಿನಲ್ಲಿ ಶನಿವಾರ ಕಂಟೈನರೊಂದು ಪಲ್ಟಿಯಾದ ಪರಿಣಾಮ ಬೈತುರ್ಲಿ-ಕುಡುಪು, ಬೈತುರ್ಲಿ-ಕುಲಶೇಖರ ವ್ಯಾಪ್ತಿಯಲ್ಲಿ ವಿಪರೀತ ವಾಹನ ದಟ್ಟಣೆ ಸೃಷ್ಟಿಯಾಗಿದೆ. ಮುಂಜಾನೆ 6.30ರ ವೇಳೆಗೆ ಮಂಗಳೂರಿನಿಂದ ಗಂಜೀಮಠದ ಕಡೆಗೆ ತೆರಳುತ್ತಿದ್ದ ಬೃಹತ್ ಗಾತ್ರದ ಕಂಟೈನರ್ ಬೈತುರ್ಲಿ ಚೌಕಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಗ್ಗುಲಿಗೆ ಉರುಳಿದೆ. ಇದರಿಂದ ಮಧ್ಯಾಹ್ನದ ತನಕ ಟ್ರಾಫಿಕ್ ಬ್ಲಾಕ್ ಉಂಟಾಗಿದೆ. ಘಟನೆಯಿಂದ ಯಾರಿಗೂ ಅಪಾಯ ಸಂಭವಿಸಿಲ್ಲ.
ಮಂಗಳೂರು ದಕ್ಷಿಣ ಠಾಣಾ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಒಂದೇ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಬೈತುರ್ಲಿ-ಕುಡುಪು ವ್ಯಾಪ್ತಿಯಲ್ಲಿ ಟ್ರಾಫಿಕ್ ಬ್ಲಾಕ್ ಆದ ಕಾರಣ ವಾಮಂಜೂರು ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಮಂಗಳಾಜ್ಯೋತಿ ಬಳಿ ತಿರುಗಿಸಿ ವಾಮಂಜೂರು -ಬೊಂದೇಲ್ ರಸ್ತೆ ಮೂಲಕ ತೆರಳಲು ಅವಕಾಶ ಮಾಡಿಕೊಡಲಾಯಿತು. ನೀರುಮಾರ್ಗದಿಂದ ಬೈತುರ್ಲಿಗೆ ಬರುತ್ತಿದ್ದ ವಾಹನಗಳು ಪಾಲ್ದಾನೆ ಕೇಂಬ್ರಿಡ್ಜ್ ಶಾಲೆ ಬಳಿ ತಿರುಗಿ ಜ್ಯೋತಿನಗರ ಮೂಲಕ ಕುಲಶೇಖರ ಡೇರಿ ದ್ವಾರದ ಬಳಿ ಮಂಗಳೂರಿಗೆ ತೆರಳುತ್ತಿದ್ದವು.
ಚೇಸ್ ತೆರವು, ಕಂಟೈನರ್ ಬಾಕಿ: ಮಧ್ಯಾಹ್ನ ವೇಳೆ ಕಂಟೈನರ್ ಚೇಸನ್ನು ಕ್ರೇನ್ ಬಳಸಿ ತೆರವು ಮಾಡಲಾಯಿತು. ಆದರೆ ಕಂಟೈನರ್ ಮಾತ್ರ ಬಾಕಿಯುಳಿದ್ದು, ಶನಿವಾರ ರಾತ್ರಿ ವೇಳೆ ತೆರವು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.