20 ಸಾವಿರ ಅಂಗನವಾಡಿ ಇನ್ನು ಸರ್ಕಾರಿ ಮಾಂಟೆಸರಿ

Lakshmi Hebbalkar
ಸಾಂದರ್ಭಿಕ ಚಿತ್ರ
Published on

ಮಂಗಳೂರು: ರಾಜ್ಯದಲ್ಲಿರುವ 70 ಸಾವಿರ ಅಂಗನವಾಡಿಗಳ ಪೈಕಿ 20 ಸಾವಿರ ಅಂಗನವಾಡಿಗಳು ಪ್ರಥಮ ಹಂತದಲ್ಲಿ ಸರ್ಕಾರಿ ಮಾಂಟೆಸರಿಗಳಾಗಿ ಬದಲಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಂಟೆಸರಿಯಲ್ಲಿ ವಿದ್ಯೆ ಹೇಳಿಕೊಡುವ ಶಿಕ್ಷಕರ ವಿದ್ಯಾರ್ಹತೆಯೂ ಚೆನ್ನಾಗಿರಬೇಕು. ಪದವಿ ಪೂರ್ಣಗೊಳಿಸಿದ 15 ಸಾವಿರ ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಿ ಅವರ ಸೇವೆಯನ್ನು ಮಾಂಟೆಸರಿ ಯಲ್ಲಿ ಬಳಸಿಕೊಳ್ಳಲಾಗುವುದು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಸ್ಮಾರ್ಟ್ ಕ್ಲಾಸ್ ಆರಂಭಿಸುತ್ತೇವೆ. ಕೇಂದ್ರ ಸರ್ಕಾರದ ಮಹಿಳಾ ಕಲ್ಯಾಣ ಅಭಿವೃದ್ಧಿ ಸಚಿವರು ಈ ವಿಷಯದಲ್ಲಿ ಹೆಚ್ಚು ಉತ್ಸುಕರಾಗಿದ್ದು, ಅಧಿಕಾರಿಗಳು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣದಲ್ಲಿ ಇ.ಡಿ.ತನಿಖೆ ನಡೆಸುತ್ತಿದೆ. ರಾಜ್ಯ ಸರ್ಕಾರದಿಂದ ನಾವು ಎಸ್‌ಐಟಿ ರಚನೆ ಮಾಡಿ ತನಿಖೆ ಮಾಡ್ತಿದ್ದೇವೆ. ಈ ಸಂದರ್ಭ ನಾನು ಏನೋ ಹೇಳಿ ರಾದ್ದಾಂತ ಆಗುವುದು ಬೇಡ. ತನಿಖೆ ಪೂರ್ಣವಾದ ಬಳಿಕ ಆ ಬಗ್ಗೆ ಮಾತನಾಡೋಣ ಎಂದ ಅವರು, ಪ್ರತಿಪಕ್ಷದಲ್ಲಿ ಈಗ ಇರುವವರು ಆಡಳಿತದಲ್ಲಿದ್ದಾಗ ಹಗರಣ ಮಾಡಿ, ಈಗ 60 ಸಂಖ್ಯೆಗೆ ಬಂದು ನಿಂತಿದ್ದಾರೆ. ಈಗ ಜನರ ಮುಂದೆ ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದೆಲ್ಲ ವಿರೋಧ ಪಕ್ಷದಲ್ಲಿದ್ದೇವೆ ಎಂದು ತೋರಿಸಲು ಅವರು ಮಾಡುತ್ತಿದ್ದಾರೆ. ನಮ್ಮ ಕಾನೂನು ತಜ್ಞರು ಮುಡಾ ವಿಷಯದಲ್ಲಿ ಹಗರಣದ ಹುರುಳಿಲ್ಲ ಎಂದಿದ್ದಾರೆ. ರಾಜಕೀಯ ದುರುದ್ದೇಶದಿಂದ ಪ್ರತಿಪಕ್ಷ ಸಿಎಂ ವಿರುದ್ಧ ಆರೋಪ ಮಾಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net