

ರಾಮನಗರ: ಎಲ್ಲ ವರ್ಗದ ಜನರೂ ಸಾಮರಸ್ಯದಿಂದ, ಮಹಿಳೆಯರೂ ಪುರುಷರಂತೆ ಸ್ವತಂತ್ರವಾಗಿ ಬಾಳುವಂತಾಗಬೇಕು ಎಂಬುದು ಮಹಾತ್ಮ ಗಾಂಧೀಜಿ ಅವರ ಕನಸಾಗಿದ್ದು, ಅಂತಹ ಮಹನೀಯರು ಕಟ್ಟಿ ಬೆಳೆಸಿದ ದೇಶದ ಆಶಯಗಳನ್ನು ಈಡೇರಿಸುವ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಜಿಲ್ಲಾಡಳಿತದವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆ.15ರ ಗುರುವಾರ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿದರು.
ಸ್ವಾತಂತ್ರ ಎಂಬುವುದಕ್ಕೆ ಎಂದಿಗೂ ಬೆಲೆಕಟ್ಟಲಾಗದು. ಇದು ಪ್ರತಿಯೊಬ್ಬ ಮನುಷ್ಯನ ಜೀವದ ಉಸಿರು ಎಂದು ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯದ ಕುರಿತು ಉಲ್ಲೇಖಿಸಿದ್ದಾರೆ.
ಅಂತರಿಕವಾಗಿ ದೇಶವನ್ನು ಸದೃಢಗೊಳಿಸಲು, ಸಮಾನತೆಗಾಗಿ ಗಾಂಧೀಜಿಯವರು ಅಸ್ಪ-ೃಶ್ಯತೆ ನಿವಾರಣೆಯನ್ನು ರಾಷ್ಟ್ರೀಯ ಆಂದೋಲನವನ್ನಾಗಿ ರೂಪಿಸಿದರು.
ಗಾಂಧೀಜಿಯವರ ಸವೋರ್ದಯ ತತ್ವದ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕ ಸರ್ಕಾರವು ದೇಶದ ಯಾವುದೇ ಸರ್ಕಾರ ಜಾರಿಗೊಳಿಸಿದ ಅತ್ಯಂತ ಬೃಹತ್ ಪ್ರಮಾಣದ ನೇರ ನೆರವು ನೀಡುವ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ.
ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ಅಂದಾಜಿನ ಪ್ರಕಾರ ವಾರ್ಷಿಕ 48 ರಿಂದ 60 ಸಾವಿರ ರೂ. ಸೌಲಭ್ಯ ನೇರವಾಗಿ ಲಭಿಸಲಿದೆ. ಜಾತಿ-ಧರ್ಮವಿಲ್ಲದೆ ಸರ್ವಜನಾಂಗದ ಅಭಿವೃದ್ಧಿಯೇ ನಮ್ಮ ಜನಪರ ಸರ್ಕಾರದ ಧ್ಯೇಯವಾಗಿದೆ ಎಂದರು.
ನಮ್ಮ ದೇಶದ ಸುತ್ತಮುತ್ತಲಿನ ಎಲ್ಲಾ ದೇಶಗಳ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ, ಸ್ವಾತಂತ್ರ ಬಂದ ನಂತರ ಅವುಗಳೆಲ್ಲಾ ಆರಾಜಕತೆಗೆ ಹಾಗೂ ಮಿಲಿಟರಿ ಆಡಳಿತಕ್ಕೆ ಮತ್ತು ಆರ್ಥಿಕ ಆಸ್ಥಿರತೆ ಒಳಗಾಗಿರುವುದು ಕಂಡು ಬರುತ್ತದೆ. ಆದರೆ ಭಾರತ ದೇಶವು ಸ್ಥಿರವಾಗಿದ್ದು ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿರಲು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರವರ ದೂರದೃಷ್ಟಿ ನಾಯಕತ್ವ ಕಾರಣ ಎಂದು ಬಣ್ಣಿಸಿದರು.
ಸುಮಾರು 524 ವಿವಿಧ ಧರ್ಮ, ಮತಗಳಿಗೆ ಸೇರಿದ ರಾಜರುಗಳಿಂದ ಚಿದ್ರ-ಚಿದ್ರವಾಗಿ ಒಡೆದು ಹೋಗಿದ್ದ ಪ್ರಾಂತ್ಯಗಳನ್ನು ಒಟ್ಟುಗೂಡಿಸಿ. ಪ್ರಜಾಪ್ರಭುತ್ವ ಹಾಗೂ ಜಾತ್ಯಾತಿತವಾದ ಒಂದು ದೇಶವನ್ನಾಗಿ ಮಾರ್ಪಡಿಸುವುದು ದೊಡ್ಡ ಸವಾಲಾಗಿದೆ ಎಂದು ಉತ್ತರಿಸಿದ್ದರೂ ಸಾಕಷ್ಟು ಒತ್ತಡಗಳ ನಡುವೆ ಎಲ್ಲವನ್ನೂ ಒಗ್ಗೂಡಿಸುವ ಕೆಲಸ ಮಾಡಿದರು.
ಸ್ವಾತಂತ್ರ ಬಂದ ನಂತರವೂ ಸಹ ನಮ್ಮ ದೇಶ ಎಲ್ಲಾ ರಂಗದಲ್ಲೂ ಪ್ರಗತಿ ಸಾಧಿಸಿರುವುದು ನಿಜವಾದರೂ ಸಹ, ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳದೇ, ಮತ್ತಷ್ಟು ಸಾಧಿಸುವ ಹಾದಿಯಲ್ಲಿ ಸಾಗಬೇಕಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಎಸ್ಪಿ ಕಾರ್ತಿಕ್ ರೆಡ್ಡಿ, ಜಿಪಂ ಸಿಇಓ ದಿಗ್ವಿಜಯ್ ಬೋಡ್ಕೆ, ಎಡಿಸಿ ಆರ್. ಚಂದ್ರಯ್ಯ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ಮುಂತಾದವರು ಇದ್ದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ವಿವಿಧ ಶಾಲಾ ಮಕ್ಕಳು ಮನ ಸೂರೆಗೊಳ್ಳುವ ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು.