ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಿ

31HDK03
Published on

ಎಚ್.ಡಿ.ಕೋಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಮತ್ತು ಆಸ್ಪತ್ರೆ ಸಿಬ್ಬಂದಿಯ ಅಸಭ್ಯ ವರ್ತನೆ ವಿರುದ್ಧ ಆಸ್ಪತ್ರೆ ಆಡಳಿತ ಅಧಿಕಾರಿಗಳಿಗೆ ತಾಲೂಕು ಮಾನವ ಹಕ್ಕುಗಳ ಮಿಷನ್ ವೇದಿಕೆ ವತಿಯಿಂದ ಭಾನುವಾರ ಮನವಿಪತ್ರ ಸಲ್ಲಿಸಿ ಒತ್ತಾಯಿಸಲಾಯಿತು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತ ಕಚೇರಿಗೆ ಆಗಮಿಸಿ ಆಡಳಿತ ಅಧಿಕಾರಿ ಡಾ.ಪೂರ್ಣಿಮಾ ಅವರಿಗೆ ವೇದಿಕೆ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಬಹುಪಾಲು ಜನರು ಮಧ್ಯಮ ವರ್ಗದವರು, ಬಡವರು ಮತ್ತು ಆದಿವಾಸಿ ಜನರು ಹೆಚ್ಚು ವಾಸ ಮಾಡುತ್ತಿದ್ದು ಆರೋಗ್ಯ ಸಮಸ್ಯೆ ಎದುರಾದಾಗ ಹೆಚ್ಚು ಜನರು ಖಾಸಗಿ ಆಸ್ಪತ್ರೆಗೆ ಹೋಗದೆ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.

ಎಚ್.ಡಿ.ಕೋಟೆ ಪಟ್ಟಣದ ಕೇಂದ್ರ ಸ್ಥಾನದಲ್ಲಿ ಇರುವ ಸಾರ್ವಜನಿಕ ಆಸ್ಪತ್ರೆಗೆ ತಾಲೂಕಿನ ಗಡಿ ಭಾಗಗಳಿಂದಲೂ ಅನಾರೋಗ್ಯ ಪೀಡಿತ ಜನರು ಆರೋಗ್ಯ ಸುಧಾರಣೆಗೆ ಬಹು ನಿರೀಕ್ಷೆ ಇಟ್ಟುಕೊಂಡು ವೈದ್ಯಕೀಯ ಸೇವೆ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಮತ್ತು ವೈದ್ಯರ ನಿರ್ಲಕ್ಷ್ಯದಿಂದ ಜನರು ಕಂಗಾಲಾಗಿದ್ದಾರೆ. ಜತೆಗೆ ಆಸ್ಪತ್ರೆಯ ಡಿ ಗ್ರೂಪ್ ನೌಕರರ ಅಸಭ್ಯ ವರ್ತನೆ ರೋಗಿಗಳಿಗೆ ಬೇಸರ ತರಿಸಿದೆ. ಈ ಬಗ್ಗೆ ಹಲವಾರು ಬಾರಿ ಆಸ್ಪತ್ರೆಯ ಆಡಳಿತ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ ಎಂದು ದೂರಿದರು.

ವೇದಿಕೆ ತಾಲೂಕು ಅಧ್ಯಕ್ಷ ಮಲಾರ ರವೀಂದ್ರ ಮಾತನಾಡಿ, ಚಿಕಿತ್ಸೆಗೆ ಬರುವ ರೋಗಿಗಳಿಗೆ ಉಚಿತವಾಗಿ ಸೇವೆ ಮಾಡಬೇಕಾದ ಸಿಬ್ಬಂದಿ ರೋಗಿಗಳೊಂದಿಗೆ ಅಸಭ್ಯ ವರ್ತನೆಯಿಂದ ನಡೆದುಕೊಳ್ಳುತ್ತಿರುವುದು ಮಾನವೀಯತೆಗೆ ಬೆಲೆಯೇ ಇಲ್ಲದಂತಾಗಿದೆ. ಹಾಗಾಗಿ ನೂತನವಾಗಿ ಆಡಳಿತ ಅಧಿಕಾರಿಗಳಾಗಿ ಜವಾಬ್ದಾರಿ ವಹಿಸಿಕೊಂಡಿರುವ ನೀವು ಆಸ್ಪತ್ರೆಯ ನ್ಯೂನತೆಗಳನ್ನು ಸರಿಪಡಿಸಿ ಸಮರ್ಪಕವಾದ ಆರೋಗ್ಯ ನೀಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ನಂತರ ವಿವಿಧ ಬೇಡಿಕೆಗಳನ್ನು ಒತ್ತ್ತಾಯಿಸಿ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಪೂರ್ಣಿಮಾ ಅವರಿಗೆ ವೇದಿಕೆ ಸದಸ್ಯರು ಮನವಿ ಸಲ್ಲಿಸಿದರು.

ಚಲುವರಾಜು, ಸೋಮೇಶ್, ಜಯರಾಮ್, ರವಿ, ಕುಮಾರಸ್ವಾಮಿ, ವಿಷಕಂಠ, ಮಹಾದೇವರಾಜ್, ಸೋಮಣ್ಣ, ಕುಮಾರ, ಕೆಂಪರಾಜು, ಚಲುವರಾಜು, ಅಂದಾನಿ, ನಾಗೇಶ್, ಮಧು, ಶಿವನಂಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net