

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನೀಡಿದ್ದ ಭರವಸೆಯಂತೆ ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪರಿಷ್ಕರಣೆ ಪ್ರಸ್ತಾವಕ್ಕೆ ಕೊನೆಗೂ ಮುಕ್ತಿ ದೊರಕಿದಂತಾಗಿದೆ.
ಕೋವಿಡ್ ಸಂಕಷ್ಟದಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಲವಾರು ರಾಜ್ಯಗಳು ವೈದ್ಯರ ವೇತನ ಕಡಿತಗೊಳಿಸಿರುವ ಸಂದರ್ಭದಲ್ಲಿ ವೈದ್ಯರುಗಳ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ವೇತನ ಪರಿಷ್ಕರಣೆ ಮಾಡಿದೆ.
ಪರಿಷ್ಕೃತಗೊಂಡಿರುವ ಶಿಷ್ಯವೇತನದ ಅನ್ವಯ ಗೃಹ ವೈದ್ಯರಿಗೆ - 30000, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೊದಲ ವರ್ಷ - 45000, ಎರಡನೇ ವರ್ಷ - 50000, ಮೂರನೇ ವರ್ಷ- 55000, ಸೂಪರ್ ಸ್ಪೆಷಾಲಿಟಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ - 55000, ಎರಡನೇ ವರ್ಷ - 60000, ಮೂರನೇ ವರ್ಷ- 65000, ಸೀನಿಯರ್ ರೆಸಿಡೆಂಟ್ಸ್ (ಕಡ್ಡಾಯ ಸರ್ಕಾರಿ ಸೇವೆ) - 60000 ಮತ್ತು ಫೆಲೋಶಿಫ್ ವಿದ್ಯಾರ್ಥಿಗಳಿಗೆ - 60000 ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
"ಐದು ವರ್ಷಗಳಿಂದ ಸರ್ಕಾರದ ಪರಿಶೀಲನೆ ಹಂತದಲ್ಲಿದ್ದ ಪ್ರಸ್ತಾವನೆಗೆ ಸಮ್ಮತಿ ನೀಡಿದ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಿಂದಿನ ಸರ್ಕಾರ ಪ್ರವೇಶ ಶುಲ್ಕವನ್ನು ಐದು ಪಟ್ಟು ಹೆಚ್ಚಿಸಿದ್ದು ವಿದ್ಯಾರ್ಥಿಗಳಿಗೆ ಹೊರೆಯಾಗಿತ್ತು. ಜೊತೆಗೆ ಇತರೆ ರಾಜ್ಯಗಳಿಗಿಂತ ಕಡಿಮೆ ಶಿಷ್ಯವೇತನ ನೀಡಲಾಗುತ್ತಿತ್ತು.
ಎಲ್ಲಕ್ಕಿಂತ ಮಿಗಿಲಾಗಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂದರ್ಭದಲ್ಲಿ ಅವರ ಬೇಡಿಕೆ ಈಡೇರಿಸುವುದು ನಮ್ಮ ಕರ್ತವ್ಯವಾಗಿತ್ತು, ಇದು ನಿಜಕ್ಕೂ ನನಗೆ ಸಮಾಧಾನ ತಂದಿದೆ” ಎಂದು ಡಾ. ಸುಧಾಕರ್ ಹೇಳಿದ್ದಾರೆ.