ಕನಕಪುರ: ಅನ್ಯಕೋಮಿನ ಪುರುಷನೊಂದಿಗೆ ತೆರಳುತ್ತಿದ್ದಳೆಂದು ಮಹಿಳೆ ಹಾಗೂ ಪುರುಷನ ತಲೆ ಬೋಳಿಸಿ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಮಹಿಳೆ ಸೇರಿ ಐವರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇಲ್ಲಿನ ಕಾಲಕ್ ನಗರದ ನಿವಾಸಿಗಳಾದ ಸುಹೇಲ್ಶರೀಫ್ (28), ಶೇಕ್ ಖಲೀಲ್ (24) ಸೈಯದ್ ನವಾಬ್(38) ನಯಾಜ್(20) ಹಾಗೂ ಶಮೀನ್(40) ಬಂಧಿತರು.
ಇಂದಿರಾ ನಗರದಲ್ಲಿ ಅನ್ಯಕೋಮಿನ ಪುರುಷನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆಂದು ಹಲವಾರು ಬಾರಿ ಗಲಾಟೆ, ನ್ಯಾಯ ಪಂಚಾಯಿತಿಗಳು ನಡೆದಿದ್ದವಾದರೂ ಶನಿವಾರ ಸಂಜೆ ಕಾಲಕ್ ನಗರದಲ್ಲಿ ಮಹಿಳೆ ಹಾಗೂ ಪುರುಷ ಇಬ್ಬರೂ ತೆರಳುತ್ತಿದ್ದ ವೇಳೆ ಅವರನ್ನು ತಡೆದ ಸುಹೇಲ್ ಶರೀಫ್, ಶೇಕ್ ಖಲೀಲ್, ಸೈಯದ್ ನವಾಬ್, ನಯಾಜ್ ಹಾಗೂ ಶಮೀನ್ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ತಲೆ ಬೋಳಿಸಿ ನೈತಿಕ ಪೊಲೀಸ್ಗಿರಿ ಪ್ರದರ್ಶಿಸಿ ಪರಾರಿಯಾಗಿದ್ದರು. ಈ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಆರೋಪಿಗಳನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಿದ್ದಾರೆ.