ಇವರು ಹಳಿಯಾಳ ಸಿದ್ದಿ ಸಮುದಾಯದ ಮೊದಲ ಪಿಎಸ್ಐ

IMG-20230307-WA0008
Published on

ಕಾರವಾರ:ಜಿಲ್ಲೆಯ ಹುಸೇನ್‌ಸಾಬ್ ಕಾಸಿಂಸಾಬ್ ಚಪ್ಪರ್‌ಕರ್ ಅವರು ಬೆಂಗಳೂರಿನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಬ್ ಇನ್ಸ್ಪೆಕ್ಟರ್(ಪಿಎಸ್‌ಐ)ಆಗಿ ನೇಮಕಗೊಂಡಿದ್ದಾರೆ. ಸಿದ್ದಿ ಸಮುದಾಯದಲ್ಲಿ ಈ ಹುದ್ದೆಗೇರಿದ ಎರಡನೇ ವ್ಯಕ್ತಿ ಹಾಗೂ ಹಳಿಯಾಳದಲ್ಲಿ ಮೊದಲಿಗರು ಎಂಬುದು ವಿಶೇಷ.
ಹಳಿಯಾಳದ ತಟ್ಟಿಗೇರಾ ಮೂಲದ ಅವರು 1996 ರ ಬ್ಯಾಚ್‌ನಲ್ಲಿ ಕಾನ್ಸ್ಟೇಬಲ್ ಆಗಿ ವೃತ್ತಿಗೆ ಸೇರಿದ್ದರು. ಕಾರವಾರ ಶಹರ, ಭಟ್ಕಳ, ಲೋಕಾಯುಕ್ತ, ಡಿಸಿಐಬಿ, ಕಾರವಾರ ಎಸ್‌ಪಿ ಕಚೇರಿ ಹೀಗೆ ವಿವಿಧೆಡೆ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಅವರು ಕದ್ರಾ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. 7 ನೇ ತರಗತಿಯವರೆಗೆ ತಟ್ಟಿಗೇರಾದಲ್ಲಿ ಓದಿದ ಅವರು, ನಂತರ ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಹಳಿಯಾಳದ ಶಿವಾಜಿ ಹೈಸ್ಕೂಲ್ ಹಾಗೂ ಪಿಯುಸಿ ಓದಿದ್ದರು. `ನಮ್ಮದು ಅತ್ಯಂತ ಹಿಂದುಳಿದ ಪ್ರದೇಶ, ನಾನು 8 ನೇ ತರಗತಿ ಇದ್ದಾಗ ನಮ್ಮೂರಿಗೆ ಮೊದಲ ಬಾರಿಗೆ ಬಸ್ ಬಂತು. ನಂತರ ಕರೆಂಟ್ ಬಂತು. ಅದುವರೆಗೆ ಚಿಮಣಿ ಬುಡ್ಡಿಯೇ ನಮ್ಮ ಓದಿನ ಬೆಳಕಾಗಿತ್ತು' ಎಂದು ನೆನಪಿಸಿಕೊಳ್ಳುತ್ತಾರೆ.
ಹಳಿಯಾಳದ ಜೂಜೆ ಸಿದ್ದಿ ಎಂಬುವವರು ತುಂಬ ಮೊದಲೇ ಪೊಲೀಸ್ ಇಲಾಖೆ ಸೇರಿದ್ದರು. ಆದರೆ, ಹೆಡ್ ಕಾನ್‌ಸ್ಟೇಬಲ್ ಆಗಿದ್ದಾಗ ಅವರು ಸ್ವಯಂ ನಿವೃತ್ತಿ ಪಡೆದರು. ಯಲ್ಲಾಪುರ ಮೂಲದ 1993 ರ ಬ್ಯಾಚ್‌ನ ಶಾರದಾ ಸಿದ್ದಿ ಅವರು ಭಡ್ತಿ ಹೊಂದಿ ಸಮುದಾಯದ ಮೊದಲ ಪಿಎಸ್‌ಐ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಸದ್ಯ ಅವರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಬಿಟ್ಟರೆ ಈ ಹುದ್ದೆಗೇರಿದ ಹೆಗ್ಗಳಿಕೆ ಹುಸೇನ್‌ಸಾಬ್ ಅವರಾಗಿದ್ದಾರೆ.
ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಮುಂಡಗೋಡ, ಬೆಳಗಾವಿ, ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಇರುವ ಬುಡಕಟ್ಟು ಸಿದ್ದಿ ಸಮುದಾಯಗಳು ಅತ್ಯಂತ ಹಿಂದುಳಿದಿವೆ. ಇತ್ತೀಚಿನ ವರ್ಷಗಳಲ್ಲಿ ಕೆಲವರು ಪದವಿ ಪಡೆದು ವಿವಿಧ ಹುದ್ದೆಗಳಿಗೆ ತೆರಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net