

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಕರಾವಳಿಯಲ್ಲಿ ಬಿಸಿಗಾಳಿ ಹಾಗೂ ಹವಾಮಾನ ವೈಪರೀತ್ಯ ಮೀನುಗಾರಿಕೆ ಮೇಲೂ ಪರಿಣಾಮ ಬೀರಿದ್ದು, ಮತ್ಸೃಕ್ಷಾಮ ತಲೆದೋರಿದೆ.
ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಬರದ ಛಾಯೆ ಆವರಿಸಿದ್ದು, ಮೂರ‌್ನಾಲ್ಕು ದಿನಗಳಿಂದ ಕರಾವಳಿ ಪ್ರದೇಶದಲ್ಲಿ ತಾಪಮಾನ ಹೆಚ್ಚಾಗುತ್ತಿರುವುದರಿಂದ ಮೀನುಗಾರರು ಕಡಲಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಕಡಲಿಗಿಳಿದ ಮೀನುಗಾರರು ಮೀನು ದೊರೆಯದೆ ನಿರಾಸೆಯಿಂದ ದಡ ಸೇರುತ್ತಿದ್ದಾರೆ.
ಲೈಟ್‌ಫಿಶಿಂಗ್ ಮೀನುಗಾರಿಕೆ ಕೊಂಚ ಉತ್ತಮವಾಗಿ ನಡೆಯುತ್ತಿದೆ. ಸಮುದ್ರದಲ್ಲಿ ಮತ್ಸೃಸಂಪತ್ತು ಯಥೇಚ್ಛ ಪ್ರಮಾಣದಲ್ಲಿ ದೊರೆಯದಿರುವುದರಿಂದ ಫಿಶಿಂಗ್, ಪರ್ಸಿನ್ ಬೋಟುಗಳು ಗಂಗೊಳ್ಳಿ ಬಂದರಿನಲ್ಲಿ ಲಂಗರು ಹಾಕಿವೆ. ಬಡ ಮೀನುಗಾರ ಕಾರ್ಮಿಕರು, ಮಹಿಳೆಯರು ಕೆಲಸ ಇಲ್ಲದೆ ಕಷ್ಟಪಟ್ಟು ದೈನಂದಿನ ಜೀವನ ಸಾಗಿಸುತ್ತಿದ್ದು, ವೆಚ್ಚಕ್ಕೆ ತಕ್ಕ ಲಾಭ ದೊರೆಯುತ್ತಿಲ್ಲ. ಬೋಟ್‌ಗಳ ಡೀಸೆಲ್‌ಗೆ ಹೆಚ್ಚಿನ ಹಣ ಖರ್ಚಾಗುತ್ತಿದ್ದು, ಬೋಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನುಗಾರರಿಗೆ ನೀಡಲು ದುಡ್ಡಿಲ್ಲ ಎಂದು ಬೋಟ್ ಮಾಲೀಕರು ಅಲವತ್ತುಕೊಂಡಿದ್ದಾರೆ.
ದರ ಏರಿಕೆ: ಮತ್ಸ್ಯಕ್ಷಾಮ ಹಾಗೂ ಹವಾಮಾನ ವೈಪರೀತ್ಯದಿಂದ ಮೀನುಗಳ ದರದಲ್ಲಿ ಕೂಡ ಭಾರಿ ಏರಿಕೆಯಾಗುತ್ತಿದೆ. ಮೀನುಗಳಿಲ್ಲದೇ ಮೀನುಗಾರರು, ಮೀನು ವ್ಯಾಪಾರಿಗಳು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಮೀನುಗಾರಿಕೆಯನ್ನೇ ಅವಲಂಬಿಸಿಕೊಂಡಿರುವ ಜನರ ಆರ್ಥಿಕ ಪರಿಸ್ಥಿತಿ ಕೂಡ ಬಿಗಡಾಯಿಸುತ್ತಿದೆ.
ಹವಾಮಾನ ವೈಪರೀತ್ಯ ಹಾಗೂ ಮತ್ಸೃಕ್ಷಾಮ ಸ್ಥಳೀಯ ಮೀನುಗಾರರಿಗೆ ಆರ್ಥಿಕ ಹೊಡೆತ ನೀಡಿದೆ. ಕಡಲಿನಲ್ಲಿ ಹೇರಳವಾಗಿ ದೊರೆಯುತ್ತಿದ್ದ ಚಟ್ಲಿ, ಬಂಗುಡೆ, ಬೂತಾಯಿ ಮೀನುಗಳು ನಿರೀಕ್ಷೆಗಿಂತ ಕಡಿಮೆ ದೊರೆಯುತ್ತಿದ್ದು, ಅಂಜಲ್, ಪಾಂಪ್ಲೆಟ್ ಮೊದಲಾದ ಉತ್ತಮ ಜಾತಿಯ ಮೀನುಗಳು ಕಾಣಲು ಸಿಗುತ್ತಿಲ್ಲ.
ಗಂಗೊಳ್ಳಿಯಲ್ಲಿ ಕಳೆದ ಮೂರ‌್ನಾಲ್ಕು ದಿನಗಳಿದ ಬಿಸಿಗಾಳಿ ಮತ್ತು ಉಷ್ಣಾಂಶದಲ್ಲಿ ಹೆಚ್ಚಳವಾದ ಕಾರಣ ಮೀನುಗಾರಿಕೆ ಮೇಲೆ ಪರಿಣಾಮ ಬೀರಿದೆ. ಮತ್ಸೃಕ್ಷಾಮದಿಂದ ಕಂಗಾಲಾಗಿರುವ ಮೀನುಗಾರರಿಗೆ ಹವಾಮಾನ ವೈಪರೀತ್ಯ ಬಲವಾದ ಹೊಡೆತ ನೀಡಿದೆ. ಮೀನಿಲ್ಲದೆ ಈ ಭಾಗದ ಮೀನುಗಾರರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮೀನುಗಾರರು ಜೀವನ ನಡೆಸುವುದು ಕಷ್ಟಕರವಾಗುತ್ತಿದೆ. ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ