

ಉಳ್ಳಾಲ: ಚಲಿಸುತ್ತಿದ್ದ ಬೋಟ್‌ನ ಇಂಜಿನ್ ಸ್ಥಗಿತಗೊಂಡ ಪರಿಣಾಮ ಮೀನುಗಾರಿಕಾ ಬೋಟ್ ಸಮುದ್ರ ತಟದ ಕಲ್ಲು ಬಂಡೆಗಳಿಗೆ ಬಡಿದು ಮಗುಚಿ ಬಿದ್ದಿದೆ. ಈ ಸಂದರ್ಭ ಬೋಟ್‌ನಲ್ಲಿದ್ದ ಮೀನುಗಾರರು ಈಜಿ ದಡ ಸೇರಿದ ಘಟನೆ ಸೋಮವಾರ ಮುಂಜಾನೆ ಉಳ್ಳಾಲ ಸೀಗ್ರೌಂಡ್‌ನಲ್ಲಿ ನಡೆದಿದೆ.
ಅಶ್ಫಾಕ್ ಎಂಬುವರ ಮಾಲೀಕತ್ವದ ಬುರಖ್ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಸೋಮವಾರ ಮುಂಜಾನೆ 2.30ರ ಹೊತ್ತಿಗೆ ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ಹೊರಟಿತ್ತು. ಬೋಟ್‌ನಲ್ಲಿ 13 ಮೀನುಗಾರರಿದ್ದರು. ಉಳ್ಳಾಲ ಸೀಗ್ರೌಂಡ್ ತಲುಪಿದಾಗ ಹಠಾತ್ತನೆ ಇಂಜಿನ್ ಸ್ಥಗಿತಗೊಂಡಿದೆ. ಇದರಿಂದಾಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಬೋಟ್ ಸಮುದ್ರ ತೀರದಲ್ಲಿ ಕಡಲ್ಕೊರೆತ ತಾತ್ಕಾಲಿಕ ತಡೆ ಹಾಕಲಾಗಿದ್ದ ಕಲ್ಲು ಬಂಡೆಗಳಿಗೆ ಬಡಿದು ಮಗುಚಿ ಬಿದ್ದಿದೆ.
ಮೀನುಗಾರರು ಈಜಿ ದಡ ಸೇರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಬೋಟ್ ಸಂಪೂರ್ಣ ಹಾನಿಗೊಳಗಾಗಿದ್ದು ಮೀನಿನ ಬಲೆ, ಇನ್ನಿತರ ಸ್ವತ್ತು ಸಮುದ್ರ ಪಾಲಾಗಿದೆ. ಒಂದೂವರೆ ಕೋಟಿ ರೂ.ನಷ್ಟು ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.