ಬೇಲೂರು: ಯಗಚಿ ಜಲಾಶಯದಲ್ಲಿ ಮೀನು ಹಿಡಿಯಲು ಬಲೆ ಬಿಡುತ್ತಿದ್ದ ವೇಳೆ ತೆಪ್ಪ ಮಗುಚಿ ಮೀನುಗಾರ ನೀರುಪಾಲಾಗಿದ್ದಾನೆ. ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಮೀನುಗಾರನ ಸುಳಿವು ಪತ್ತೆಯಾಗಿಲ್ಲ.
ತಾಲೂಕಿನ ಬಂಟೇನಹಳ್ಳಿ ಗ್ರಾಮದ ಖದೀರ್ (50) ಶನಿವಾರ ಸಂಜೆ ಎಂದಿನಂತೆ ಮೀನು ಹಿಡಿಯುವುದಕ್ಕಾಗಿ ಪಟ್ಟಣ ಸಮೀಪದ ಯಗಚಿ ಜಲಾಶಯದಲ್ಲಿ ಒಬ್ಬರೇ ತೆಪ್ಪದಲ್ಲಿ ಬಲೆ ಬಿಡಲು ಹೋಗಿದ್ದರು. ಇವರೊಂದಿಗೆ ಬೇರೆ ತೆಪ್ಪದಲ್ಲಿ ಹೋಗಿದ್ದ ಇತರರು ಬಲೆ ಬಿಟ್ಟು ಜಲಾಶಯದಿಂದ ಬೇಗ ವಾಪಸ್ ಬಂದಿದ್ದಾರೆ. ಆದರೆ, ಖದೀರ್ ಒಬ್ಬರೇ ನಿಧಾನವಾಗಿ ಬಲೆ ಬಿಡುತ್ತಿದ್ದಾಗ ಗಾಳಿ, ಮಳೆ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಖದೀರ್ ಇದ್ದ ತೆಪ್ಪಕ್ಕೆ ನೀರು ಬರಲಾರಂಭಿಸಿದೆ. ಗಾಳಿ ಜೋರಾಗಿ ಬೀಸಿದ್ದರಿಂದ ತೆಪ್ಪ ಮಗುಚಿ ಬಿದ್ದು ನೀರಿನಲ್ಲಿ ಮುಳುಗಿದ್ದಾರೆ.
ಸೋಮವಾರ ಸಂಜೆಯವರೆಗೂ ಜಲಾಶಯದಲ್ಲಿ ಮೀನುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿದರೂ ಪ್ರಯೋಜನವಾಗಲಿಲ್ಲ. ಖದೀರ್‌ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.