ನೀರಿನ ರಭಸಕ್ಕೆ ಕೊಚ್ಚಿಹೋದ ಮೀನುಗಳು

water flow
Published on

* ಮಳೆಗೆ ಕೋಡಿ ಹರಿದ ಕೆರೆಗಳು

* ಸರ್ಕಾರ ನೆರವಿಗೆ ಧಾವಿಸಿಲ್ಲ

ಎಂ.ಎಸ್​.ಸಿದ್ದಲಿಂಗೇಶ್ವರ ಮಾಗಡಿ

ತಾಲೂಕಿನಾದ್ಯಂತ ಸುರಿದ ಬಾರಿ ಮಳೆಯಿಂದಾಗಿ ಕೆರೆಗಳು ಕೋಡಿ ಹರಿದ ಸಂಭ್ರಮ ಮನೆಮಾಡಿದೆಯಾದರೂ ಕೆರೆಯಲ್ಲಿದ್ದ ಮೀನುಗಳು ಕೊಚ್ಚಿಹೋಗಿರುವುದು ಮೀನುಗಾರರನ್ನು ಸಂಕಷ್ಟಕ್ಕೆ ದೂಡಿದೆ.

ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಮಂಚನಬೆಲೆ ಜಲಾಶಯ, ನಾರಸಂದ್ರ, ಕೆಂಪಸಾಗರ, ಬೆಳಗುಂಬ, ಭರ್ಗಾವತಿ, ಕಲ್ಯಾ ಸೇರಿ ಬಹುತೇಕ ಕೆರೆ, ಕಟ್ಟೆಗಳು ಕೋಡಿ ಹರಿದಿವೆ. ಈ ವೇಳೆ ಕೆರೆಯ ಕೋಡಿಯ ಬಳಿ ಅಳವಡಿಸಿದ್ದ ತಂತಿಯ ಮೆಸ್​ ಕಿತ್ತು ಮೀನುಗಳು ನೀರಿನಲ್ಲಿ ಹರಿದು ಹೋಗಿವೆ.

ಮಂಚನಬೆಲೆ ಜಲಾಶಯ, ಬೆಳಗುಂಬ, ಕೆಂಪಸಾಗರ, ನಾರಸಂದ್ರ ಕೆರೆಗಳ ವಿಸ್ತೀರ್ಣ ದೊಡ್ಡದಾಗಿದ್ದು, ಈ ಕೆರೆಗಳಲ್ಲಿ 1ರಿಂದ 10 ಕೆಜಿ ತೂಕದವರೆಗಿನ ಮೀನುಗಳಿದ್ದವು. ಕೆರೆ ಗುತ್ತಿಗೆ ಪಡೆದು ಮೀನು ಸಾಕಾಣಿಕೆ ಮಾಡಿರುವ ಬಹುತೇಕರು ಮೀನು ಹಿಡಿದು ಮಾರಾಟ ಮಾಡಲು ತಯಾರಿ ಮಾಡಿಕೊಂಡಿದ್ದ ನಡುವೆ ಮಳೆ ಹೆಚ್ಚಾಗಿ, ಮೀನು ಹಿಡಿಯಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆರೆಯಿಂದ ಮೀನುಗಳು ಹೊರ ಹೊಗದಂತೆ ಮೆಸ್​ ಕಟ್ಟಲಾಯಿತು. ಮಳೆಗೆ ಮೆಸ್​ ಕಿತ್ತುಹೋಗಿದೆ. ಇದರಿಂದ ಮೀನುಗಳು ಹೊರಹೋಗಿದೆ ಎಮದು ಮೀನುಗಾರರು ಅಲವತ್ತು ಅಳಲು ತೋಡಿಕೊಂಡಿದ್ದಾರೆ.

ಪ್ರತಿ ಕೆರೆಗಳಿಗೆ ಲಕ್ಷಾಂತರ ರೂ. ಟೆಂಡರ್​ ಪಡೆದು ಸರ್ಕಾರಕ್ಕೆ ಹಣ ನೀಡಿ ಕೆರೆಗಳಿಗೆ ಮೀನು ಮರಿಗಳನ್ನು ಬಿಟ್ಟಿದ್ದೆವು. ಮಳೆಯಿಂದ ಮೀನುಗಳು ಕೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ನಮ್ಮ ನೆರವಿಗೆ ಧಾವಿಸುವುವರು ಯಾರು ಎಂದು ಮೀನುಗಾರರ ಪ್ರಶ್ನೆಯಾಗಿದೆ.

ಮಂಚನಬೆಲೆ ಜಲಾಶಯಕ್ಕೆ ಜೂನ್​ನಲ್ಲಿ ಸುಮಾರು 10 ಲಕ್ಷ ಮೀನಿನ ಮರಿ ಬಿಡಲಾಗಿತ್ತು. ಜಲಾಶಯದಿಂದ ನೀರನ್ನು ಹೊರ ಬಿಟ್ಟಿರುವುದರಿಂದ ಶೇ. 90 ಮೀನುಮರಿಗಳು ಕೊಚ್ಚಿಹೊಗಿವೆ. ತಾಲೂಕಿನಲ್ಲಿ ಸುಮಾರು 1 ಸಾವಿರ ಮಂದಿ ಮೀನುಗಾರರಿದ್ದು, ಮಳೆಯಿಂದ ಜಲಾಶಯ, ಕೆರೆ ತುಂಬಿ ಕೋಡಿ ಹರಿದು ಮಳೆಯ ನೀರಿಗೆ ಮೀನುಗಳು, ಮೀನು ಮರಿಗಳು ಕೊಚ್ಚಿಹೋಗಿ ಲಾಂತರ ರೂ. ನಷ್ಟವಾದರೆ, 1 ಸಾವಿರ ಮಂದಿಗೆ ಕೆಲಸ ಇಲ್ಲದೆ ಪರಿತಪ್ಪಿಸುವಂತಾಗಿ ಜೀವನ ನಿರ್ವಹಣೆಗೆ ಅಸಾಧ್ಯವಾಗಿದೆ.

ಮೀನುಗಾರರ ನೆರವಿಗೆ ಸರ್ಕಾರ ಯಾವುದೇ ಸವಲತ್ತು ನೀಡಿಲ್ಲ. ಸರ್ಕಾರದಿಂದ ತುರ್ತಾಗಿ ಪರಿಹಾರ ಅಥವಾ ನೆರವು ನೀಡುವಂತೆ ಮೀನುಗಾರರು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂಬ ಉತ್ತರ ಹೇಳಿದ್ದಾರೆ ಎಂದು ಮೀನುಗಾರರ ಆರೋಪವಾಗಿದೆ.

ಮಳೆ ನೀರು ತುಂಬಿ ಕೆರೆಯಿಂದ ಮೀನುಗಳು ಕೊಚ್ಚಿ ಹೋಗಿರುವ ಬಗ್ಗೆ ಮೀನುಗಾರರಿಗೆ ನಷ್ಟದ ಯಾವುದೇ ಪರಿಹಾರ ಪ್ರಸ್ತಾವನೆ ಸರ್ಕಾರದ ಹಂತದಲ್ಲಿಲ್ಲ. ಈ ಬಗ್ಗೆ ಟೆಂಡರ್​ ಪಡೆಯುವ ಮುನ್ನಾ ಸಂಬಂಧಪಟ್ಟವರಿಗೆ ಸೂಚಿಸಲಾಗಿರುತ್ತದೆ.

ಮಹಂತೇಶ್​

ಮೀನುಗಾರಿಕೆ ಇಲಾಖೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net