

ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿದ್ದು ಶನಿವಾರದಿಂದ 80 ವರ್ಷ ಮೇಲ್ಪಟ್ಟ ಮತದಾರರು ಮನೆಯಲ್ಲಿ ಮತದಾನ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುವುದು.
80 ವರ್ಷ ಮೇಲ್ಪಟ್ಟ ಮತದಾರರಿಗೆ ಅನುಕೂಲವಾಗುವಂತೆ ಆಯೋಗ ನಮೂನೆ-12ಡಿ ಮೂಲಕ ಅರ್ಜಿ ಸಲ್ಲಿಸಿ ಅಂಚೆ ಮತಪತ್ರಗಳನ್ನು ಪಡೆದು ಮತದಾನ ಮಾಡಲು ಮೊದಲ ಬಾರಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟ ಮತದಾರರ ಮನೆಗಳಿಗೆ ಬಿಎಲ್‌ಒಗಳು ತೆರಳಿ ನಮೂನೆ-12 ಡಿ ಅರ್ಜಿಗಳನ್ನು ಹಂಚಿಕೆ ಮಾಡಿದ್ದರು. ಮತಗಟ್ಟೆಗಳಿಗೆ ಬರಲು ಇಚ್ಛಿಸದ 80 ವರ್ಷ ಮೇಲ್ಪಟ್ಟ ಮತದಾರರು ಅಂಚೆ ಮತಪತ್ರಗಳ ಮೂಲಕ ಮನೆಯಲ್ಲೆ ಮತ ಚಲಾಯಿಸಿದರು.
ಶನಿವಾರದಿಂದ 80 ವರ್ಷ ಮೇಲ್ಪಟ್ಟ ಮತದಾರರ ಅಂಚೆ ಮತಪತ್ರ ಮತದಾನ ಆರಂಭವಾಗಿದ್ದು, ಜಿಲ್ಲೆಯಾದ್ಯಂತ ಈ ಪ್ರಕ್ರಿಯೆ ನಡೆದಿದೆ. ಬಿಎಲ್‌ಒ, ಸೆಕ್ಟರ್ ಅಧಿಕಾರಿ, ಮತಗಟ್ಟೆ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್, ವಿಡಿಯೋ ಗ್ರಾಫರ್‌ಗಳು ಮತದಾರರ ಮನೆಗಳಿಗೆ ತೆರಳಿ ಅಂಚೆ ಮತಪತ್ರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.