ಮೊದಲು ಸೊಗಸು.. ನಂತರ ಮುನಿಸು...

18-RNR-01- MEKKEJOLA
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಈ ಬಾರಿ ತಡವಾಗಿಯಾದರೂ ಜುಲೈನಲ್ಲಿ ಸುರಿದ ಮುಂಗಾರು ಮಳೆ ರೈತರಲ್ಲಿ ಹರ್ಷ ಮೂಡಿಸಿತ್ತು. ಆದರೆ, ಕಳೆದ 20 ದಿನದಿಂದ ಮಳೆ ಸಂಪೂರ್ಣ ಮಾಯವಾಗಿದ್ದು, ಬೆಳೆಯುವ ಹಂತದಲ್ಲಿದ್ದ ಮೆಕ್ಕೆಜೋಳ, ಶೇಂಗಾ, ಉಳ್ಳಾಗಡ್ಡಿ ಸೇರಿ ಇತರ ಬೆಳೆಗಳು ಒಣಗಲಾರಂಭಿಸಿವೆ. ರೈತರಿಗೆ ದಿಕ್ಕು ತೋಚದಂತಾಗಿದೆ.


ತಾಲೂಕಿನಲ್ಲಿ 2023-24ನೇ ಸಾಲಿಗೆ 57,901 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈವರೆಗೆ ಪೂರ್ಣಗೊಂಡಂತೆ 41,136 ಹೆಕ್ಟೇರ್ ಮೆಕ್ಕೆಜೋಳ, 575 ಹೆಕ್ಟೇರ್ ಹತ್ತಿ, 612 ಹೆಕ್ಟೇರ್ ತೊಗರಿ, 488 ಹೆಕ್ಟೇರ್ ಸೋಯಾಬೀನ್ ಹಾಗೂ 168 ಹೆಕ್ಟೇರ್ ಹೆಸರು ಬಿತ್ತನೆ ಮಾಡಲಾಗಿದೆ. ಆದರೆ, ಜುಲೈ ತಿಂಗಳಲ್ಲಿ 97 ಮಿ.ಮೀ. ವಾಡಿಕೆ ಮಳೆಯಿದ್ದರೆ 60 ಮಿ.ಮೀ. ಮಳೆಯಾಗಿತ್ತು. ಆಗಸ್ಟ್ ತಿಂಗಳಲ್ಲಿ 62 ಮಿಮೀ ವಾಡಿಕೆ ಮಳೆಯಿದ್ದರೆ ಈವರೆಗೆ ಹನಿ ನೀರೂ ಭೂಮಿಗೆ ಬಿದ್ದಿಲ್ಲ. ಹೀಗಾದರೆ ಬೆಳೆಗಳಿಗೆ ನೀರುಣಿಸುವುದು ಹೇಗೆ ಎಂದು ರೈತರು ಚಿಂತೆಗೀಡಾಗಿದ್ದಾರೆ.


ಸಂಕಷ್ಟಕ್ಕೆ ಸಿಲುಕಿದ ಅನ್ನದಾತ: ಉತ್ತಮ ಮಳೆ ನಿರೀಕ್ಷೆಯಲ್ಲಿ ರೈತರು ಒಂದು ಎಕರೆ ಮೆಕ್ಕೆಜೋಳ ಬೆಳೆಯಲು 22 ಸಾವಿರ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಕೆಲವರು ಆರಂಭದಲ್ಲಿ ಬಿತ್ತನೆ ಮಾಡಿ ಮಳೆ ಬಾರದ ಕಾರಣ ಅವು ಬತ್ತಿ ಹೋಗಿದ್ದವು. ಮಳೆ ಬಂದ ಬಳಿಕ ಮತ್ತೊಂದು ಬಾರಿ ಬಿತ್ತನೆ ಮಾಡಿದ್ದಾರೆ. ಅದೇ ರೀತಿ ಉಳಿದ ಬೆಳೆಗಳನ್ನೂ ಕೆಲ ರೈತರು ಎರಡು ಬಾರಿ ಬಿತ್ತನೆ ಮಾಡಿದ್ದಾರೆ. ಆದರೀಗ ಮಳೆ ಇಲ್ಲದೆ ರೈತರು ಸಂಕಷ್ಟ ಎದುರಿಸುವಂತಾಗಿದೆ.


ವಿದ್ಯುತ್ ಚೆಲ್ಲಾಟ: ಮಳೆಯಾಶ್ರಿತ ರೈತರು ಮಳೆಗಾಗಿ ಕಾಯುತ್ತ ಕುಳಿತರೆ, ನೀರಾವರಿ ರೈತರು ಬೆಳೆಗಳಿಗೆ ನೀರು ಹಾಯಿಸಲು ವಿದ್ಯುತ್​ಗಾಗಿ ಕಾಯುತ್ತ ಕುಳಿತುಕೊಳ್ಳುವಂತಾಗಿದೆ. ಬೆಳೆಗಳಿಗೆ ನೀರುಣಿಸಲು ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಪಂಪ್​ಸೆಟ್​ಗಳಿಗೆ ಪೂರೈಕೆಯಾಗುತ್ತಿರುವ 6 ಗಂಟೆ ವಿದ್ಯುತ್​ನಲ್ಲೂ ಲೋಡ್​ಶೆಡ್ಡಿಂಗ್ ಹಾಗೂ ಇತರ ಕಾರಣಗಳಿಂದ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದಾಗಿ ನೀರಾವರಿ ಬೆಳೆಗಳಿಗೂ ನೀರು ಹಾಯಿಸಲು ಆಗದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ನೀರಾವರಿ ಹೊಂದಿರುವ ರೈತರ ಮೆಕ್ಕೆಜೋಳ, ತರಕಾರಿ ಸೇರಿ ವಿವಿಧ ಬೆಳೆಗಳು ಒಣಗಲಾರಂಭಿಸಿವೆ. ಸಮರ್ಪಕ ವಿದ್ಯುತ್ ಪೂರೈಸುವಂತೆ ಜಿಲ್ಲೆಯ ಹಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ತಿಂಗಳಿಗೆ ಹೋಲಿಸಿದರೆ ಈ ಬಾರಿ ಮಳೆ ಕಡಿಮೆಯಾಗಿದೆ. ಆಗಸ್ಟ್ ತಿಂಗಳಲ್ಲಿ 62 ಮಿ.ಮೀ. ವಾಡಿಕೆ ಮಳೆಯಿದ್ದರೂ ಇನ್ನೂತನಕ ಹನಿ ನೀರೂ ಸುರಿದಿಲ್ಲ. ಮುಂದಿನ ದಿನದಲ್ಲಿ ಮಳೆಯಾದರೂ ಕಡಿಮೆ ಪ್ರಮಾಣದಲ್ಲಿ ಆಗಲಿದೆ ಎಂಬ ಮಾಹಿತಿಯಿದೆ. ಆದ್ದರಿಂದ ಮಳೆಗಾಗಿ ಕಾಯುತ್ತಿದ್ದೇವೆ. - ಶಿವಾನಂದ ಹಾವೇರಿ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿಮಳೆ ನೆಚ್ಚಿಕೊಂಡು ಸಾಲ ಮಾಡಿ ಜಮೀನಿನಲ್ಲಿ ಮೆಕ್ಕೆಜೋಳ ಸೇರಿ ಇತರ ಬೆಳೆಗಳನ್ನು ಬಿತ್ತನೆ ಮಾಡಿದ್ದೇವೆ. ಮುಂಗಾರು ಮಳೆ ಆರಂಭದಲ್ಲಿ ಕೈಕೊಟ್ಟರೂ ನಂತರ ಚೆನ್ನಾಗಿ ಸುರಿಯಿತು. ಆದರೆ, ಈಗ ಬೀಳಬೇಕಿದ್ದ ಮಳೆ ಸಂಪೂರ್ಣ ಮಾಯವಾಗಿವೆ. ವಿದ್ಯುತ್ ಕೈ ಕೊಡುತ್ತಿರುವ ಕಾರಣ ನೀರಾವರಿ ಬೆಳೆಗೂ ನೀರು ಹಾಯಿಸಲು ಆಗುತ್ತಿಲ್ಲ. ಬೆಳೆಗಳು ಒಣಗಲಾರಂಭಿಸಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ರೈತರ ಸ್ಥಿತಿ ಮತ್ತಷ್ಟು ಹದಗೆಡಲಿದೆ. - ಈರಪ್ಪ ಬೆನ್ನೂರ ಮೆಕ್ಕೆಜೋಳ ಬೆಳೆದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net