ಜಾನೂರು ಸ್ಪರ್ಧೆಯಲ್ಲಿ ರಶ್ಮಿಗೆ ಪ್ರಥಮ ಬಹುಮಾನ

FotoJet
Published on

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಅರಳಿದ ವಾಲ್ಮೀಕಿ ಆಶ್ರಮ, ಸೀತಾರಾಮ ಲಕ್ಷ್ಮಣ ಮಂಟಪ

ಚಿಂತಾಮಣಿ: ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಜಾನೂರು ಪ್ರದರ್ಶನದಲ್ಲಿ ತಾಜಾ ಹಸಿರು ತೆಂಗಿನ ಎಲೆಗಳು ಮತ್ತು ಹೂವುಗಳನ್ನು ಬಳಸಿ ಅಮೃತಸರದ ವಾಲ್ಮೀಕಿ ಆಶ್ರಮ ಮತ್ತು ಸೀತಾರಾಮ ಲಕ್ಷ್ಮಣ ಮಂಟಪವನ್ನು ಸಂಕೀರ್ಣದ ವಿವರಗಳು ಅಶ್ವಮೇಧ ಯಾಗ, ಲವ-ಕುಶ ಜನನ ಇನ್ನು ಅನೇಕ ವಿಷಯಗಳನ್ನು ಒಳಗೊಂಡ ಕಲಾಕೃತಿಯನ್ನು ಪ್ರದರ್ಶಿಸಿರುವ ನಗರದ ವೆಂಕಟೇಶ್ವರ ಬಡಾವಣೆ ನಿವಾಸಿ ಕಲಾವಿದೆ ರಶ್ಮಿಹರ್ಷ ಅವರು ಪ್ರಥಮ ಬಹುಮಾನ ಪಡೆದಿದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

2024ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬಾಳೆ ಮತ್ತು ತೆಂಗಿನ ಗರಿಗಳಲ್ಲಿ ತಯಾರಿಸಿದ ಅಯೋಧ್ಯೆಯ ರಾಮನ ಮಂಟಪ, ರಾಮ-ಸೀತೆ, ಲಕ್ಷ್ಮಣರ ಪ್ರತಿಮೆ ತಯಾರಿಸಿದ್ದ ರಶ್ಮಿ, ಜಾನೂರು ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದರು.

ನಂತರ 2024ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತ ಸ್ಪರ್ಧೆಯಲ್ಲಿಯೂ ರಶ್ನಿ ಅವರು ದೆಹಲಿಯ ಹಳೆಯ ಸಂಸತ್ ಭವನದ ಕಟ್ಟಡವನ್ನು ತೆಂಗಿನ ಗರಿಗಳಿಂದ ರಚಿಸಿ ಪ್ರಥಮ ಬಹುಮಾನ ಪಡೆದುಕೊಂಡಿದ್ದರು.

ಈ ಬಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವದ 216ನೇ ಫಲಪುಷ್ಪ ಪ್ರದರ್ಶನದ ತೋಟಗಳ ಸ್ಪರ್ಧೆಗಳಾದ ಇಕೆಬಾನಾ, ತರಕಾರಿ ಕೆತ್ತನೆ, ಥಾಯ್ ಆರ್ಟ್, ಜಾನೂರು, ರಂಗೋಲಿ ಸ್ಪರ್ಧೆ, ಪುಷ್ಪಭಾರತಿ, ಬೋನ್ಸಾಯ್, ಒಣ ಹೂವಿನ ಜೋಡಣೆ ಸೇರಿ ಹಲವಾರು ಪೂರಕ ಕಲೆಗಳ ಸ್ಪರ್ಧೆ ಆಯೋಜಿಸಲಾಗಿದ್ದು ನೂರಾರು ಕಲಾವಿದರು ಭಾಗವಹಿಸಿದ್ದಾರೆ.

ತೋಟಗಾರಿಕೆ ಇಲಾಖೆಯ ಡಾ. ಎಂ.ಮರಿಗೌಡ ಸ್ಮಾರಕ ಭವನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಉದಯ್ ಬಿ. ಗರುಡಾಚಾರ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿ ರವಿ ಡಿ. ಚನ್ನಣ್ಣನವರ್, ತೋಟಗಾರಿಕೆ ಮತ್ತು ರೇಷ್ಮೆ ಕೃಷಿ ಇಲಾಖೆ ರಾಜ್ಯ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್, ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್.ರಮೇಶ್, ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ಮತ್ತಿತರ ಗಣ್ಯರು ರಶ್ಮಿ ಅವರಿಗೆ ಪಾರಿತೋಷಕ, ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net