

ಚನ್ನಪಟ್ಟಣ:
ನಗರದ ಕುಡಿನೀರುಕಟ್ಟೆ ಸಮೀಪದ ಇನ್ ಟೆಲ್ಲೋ ಅಟಿಕೆ ತಯಾರಿಕಾ ಕಾರ್ಖಾನೆಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ಅಟಿಕೆಗಳು ಹಾಗೂ ಕಚ್ಚಾ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ.
ಚನ್ನಪಟ್ಟಣದ ನಾಗೇಂದ್ರ ಎಂಬುವರಿಗೆ ಸೇರಿದ ಮಕ್ಕಳ ಅಟಿಕೆ ತಯಾರಿಸುವ ಈ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಹೊಗೆ ಕಾಣಿಸಿಕೊಂಡಿದೆ. ಅವಘಡದ ಮಾಹಿತಿ ತಿಳಿದ ಕೂಡಲೇ ಸಾರ್ವಜನಿಕರು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಎರಡು ವಾಟರ್ ಜೆಟ್ ವಾಹನದ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.
ಕಾರ್ಮಿಕನ ರಕ್ಷಣೆ!
ಭಾನುವಾರ ಕಾರ್ಖಾನೆಗೆ ರಜೆಯಿದ್ದ ಕಾರಣ ಯಾವುದೇ ಹೆಚ್ಚಿನ ಕಾರ್ಮಿಕರು ಇರಲಿಲ್ಲ. ಆದರೆ, ಒರ್ವ ಕಾರ್ಮಿಕ ಒಳಗಿದ್ದು, ತಕ್ಷಣವೇ ಸಾರ್ವಜನಿಕರು ಕಾರ್ಖಾನೆಯ ಬಾಗಿಲು ಹೊಡೆದು ಒಳಗೆ ಸಿಲುಕಿದ್ದ ಓರ್ವ ಕಾರ್ಮಿಕನ್ನು ರಕ್ಷಣೆ ಮಾಡಿದ್ದಾರೆ.
ಅಲ್ಲದೇ, ಬೆಂಕಿ ಹೆಚ್ಚಾಗುವ ಮೊದಲೆ ಕಾರ್ಖಾನೆ ಒಳಗಿದ್ದ ನಾಲ್ಕು ಗ್ಯಾಸ್ ಸಿಲಿಂಡರ್ ಹೊರತಂದ ಕಾರಣ, ಬಾರಿ ಅವಘಡ ತಪ್ಪಿದೆ. ಅವಘಡದಲ್ಲಿ ಲಕ್ಷಾಂತರ ರೂ ನಷ್ಟವಾಗಿದ್ದು, ಹೆದ್ದಾರಿಯಲ್ಲಿ ದಟ್ಟ ಹೊಗೆ ಆವರಿಸಿಕೊಂಡು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು.