ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ; ಮೂವರು ಕಾರ್ಮಿಕರು ಸಜೀವ ದಹನ

Crackers Godown
Published on

ಹಾವೇರಿ: ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ಹಾವೇರಿ ತಾಲ್ಲೂಕಿನ ಆಲದಕಟ್ಟಿಯಲ್ಲಿ ನಡೆದಿದೆ.

ಮೃತರನ್ನು ದ್ಯಾಮಪ್ಪ ಓಲೇಕಾರ್​(45), ರಮೇಶ್​​ ಬಾರ್ಕಿ(28), ಶಿವಲಿಂಗ ಅಕ್ಕಿ(28) ಎಂದು ಗುರುತಿಸಲಾಗಿದೆ. ವೆಲ್ಡರ್​​ ವಾಸಿಂ ಶಫಿ ಅಹ್ಮದ್(32)​​ ಹಾಗೂ ಶೇರು ಮಾಳಪ್ಪ ಕಟ್ಟಿಮನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಾಹಿತಿ ಪಡೆದ ಸಿಎಂ

ವೀರೇಶ್​ ಸಾತೇನಹಳ್ಳಿ ಎಂಬುವವರಿಗೆ ಈ ಗೋದಾಮು ಸೇರಿದ್ದು, ಮುಂಬರುವ ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಪಟಾಕಿಯನ್ನು ದಾಸ್ತಾನು ಮಾಡಲಾಗಿತ್ತು. ಗೋದಾಮಿನ ಗೇಟ್​ ವೆಲ್ಡಿಂಗ್​ ಮಾಡುವ ಸಂದರ್ಭದಲ್ಲಿ ಬೆಂಕಿ ಕಿಡಿ ಹಾರಿ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದ ಪಟಾಕಿ ಬೆಂಕಿಗಾಹುತಿಯಾಗಿದೆ ಎಂದು ಅಂದಾಜಿಸಲಾಗಿದೆ.

Crackers Godown

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸತತ ಐದು ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತ್ತೋಟಿಗೆ ತಂದಿದ್ದಾರೆ. ಕಾರ್ಯಾಚರಣೆಯಲ್ಲಿ ಆರು ವಾಹನಗಳು ಹಾಗೂ 25 ಸಿಬ್ಬಂದಿ ಪಾಲ್ಗೊಂಡಿದ್ದರು. ಗೋದಾಮಿನ ಒಳಗೆ ಇನ್ನೂ ಇಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ಪಟಾಕಿ ಗೋದಾಮಿನಲ್ಲಿ ಸಂಭವಿಸಿರುವ ಅಗ್ನಿ ಅವಘಡದ ಕುರಿತು ಮಾಹಿತಿ ಪಡೆದಿರುವ ಸಿಎಂ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್​ ಪಾಟೀಲ್​ ಅವರಿಗೆ ದುರಂತ ನಡೆದ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net