ಸ್ಫೋಟ ಪ್ರಕರಣ ಗಾಯಾಳು ಬಾಲಕಿ ಮೃತ್ಯು

New Project (10)
Published on

ಉಳ್ಳಾಲ: ಹದಿನೈದು ದಿನಗಳ ಹಿಂದೆ ಮಂಜನಾಡಿ ಗ್ರಾಮದಲ್ಲಿ ಸಂಭವಿಸಿದ್ದ ಗ್ಯಾಸ್ ಸೋರಿಕೆಯಿಂದ ಬೆಂಕಿ ತಗುಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮಕ್ಕಳ ಪೈಕಿ ಓರ್ವ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಮೊಂಟೆಪದವು ಸರ್ಕಾರಿ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಝುಲೇಕಾ ಮೆಅದಿಯಾ ಮೃತ ಬಾಲಕಿ.

ಡಿ.8ರಂದು ಮಂಜನಾಡಿ ಗ್ರಾಮದ ಖಂಡಿಕ ನಿವಾಸಿಯಾಗಿದ್ದ ಮುತ್ತಲಿಬ್ ಮನೆಯಲ್ಲಿ ತಡರಾತ್ರಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಸ್ಫೋಟ ಸಂಭವಿಸಿತ್ತು. ಮುತ್ತಲಿಬ್ ಪತ್ನಿ ಖುಬ್ರಾ ಮತ್ತು ಮಕ್ಕಳಾದ ಝುಲೇಕಾ ಮೆಅದಿಯಾ, ವಾಝಿಯಾ ಮತ್ತು ವಾಯಿದಾ ಕೊಠಡಿಯಲ್ಲಿ ಮಲಗಿದ್ದರು. ಸ್ಫೋಟದ ಪರಿಣಾಮ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿತ್ತು. ಕೊಠಡಿಗೂ ಬೆಂಕಿ ತಗಲಿ ಸಂಪೂರ್ಣ ಸುಟ್ಟು ಹೋಗಿದ್ದು, ನಾಲ್ವರು ಗಂಭೀರವಾಗಿ ಸುಟ್ಟ ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚರ್ಮ ಸಂಪೂರ್ಣ ಸುಟ್ಟಿದ್ದರಿಂದ ಪ್ಲಾಸ್ಟಿಕ್ ಸರ್ಜರಿ ನಡೆಸಲು ಅಗತ್ಯವಿದ್ದ ಚರ್ಮ ವ್ಯವಸ್ಥೆ ಮಹಾರಾಷ್ಟ್ರ ಮತ್ತು ಮಣಿಪಾಲ ಆಸ್ಪತ್ರೆಯಿಂದ ವಾಡಲಾಗಿತ್ತು. ಈ ನಡುವೆಯೇ ಮುತ್ತಲಿಬ್ ಪತ್ನಿ ಖುಬ್ರಾ ಅವರು ಚಿಕಿತ್ಸೆ ಫಲಕಾರಿಯಾಗದೆ ಡಿ.13ರಂದು ಮೃತಪಟ್ಟಿದ್ದರು. ಇದೀಗ ಅವರ ಹಿರಿಯ ಮಗಳು ಝುಲೇಕಾ ಮೆಅದಿಯಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನಿಬ್ಬರು ಮಕ್ಕಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net