

Hindu : ಹಿಂದು ಬಾಲಕಿಯೊಬ್ಬಳಿಗೆ ನೀನು ಮುಸ್ಲಿಮಳಾಗು, ನಿನ್ನನ್ನು ಓಡಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಎಂದು ಲೈಂಗಿಕ ದೌರ್ಜನ್ಯ ಎಸಗಿ ಹಾಗೂ ಮತಾಂತರಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ತಾಲೂಕಿನ ಕರ್ಜಗಿ ಗ್ರಾಮದ ಮೆಹಬೂಬ ಅಲಿ ಬಾಬುಸಾಬ್ ನದಾಫ್ (28) ಹಾಗೂ ಈತನ ಸ್ನೇಹಿತ ಸೋಯೆಲಸಾಬ ಖಾಸೀಮಸಾಬ ಮೆಳ್ಳಳ್ಳಿ (20) ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
1ನೇ ಆರೋಪಿ ಮೆಹಬೂಬ ಅಲಿ ಎಂಬುವನು 16 ವರ್ಷದ ಅಪ್ರಾಪ್ತಳು ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ದಾರಿಯಲ್ಲಿ ಅಡ್ಡಗಟ್ಟಿ ನಿಂತು "ನೀನು ಮುಸ್ಲಿಮಳಾಗು, ನಿನ್ನನ್ನು ಓಡಿಸಿಕೊಂಡು ಹೋಗಿ ಮದುವೆ ಮಾಡಿಕೊಂಡು ಬೇರೆ ಊರಲ್ಲಿ ಇಟ್ಟುಕೊಳ್ಳುತ್ತೇನೆ' ಎಂದು ಪೀಡಿಸುತ್ತಿದ್ದ.
ಅಲ್ಲದೆ ಸೋಮವಾರ ಸ್ನೇಹಿತ ಸೋಯೆಲಸಾಬನನ್ನು ಕರೆದುಕೊಂಡು ಬಂದ ಮೆಹಬೂಬಅಲಿ, ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತಳನ್ನು ತಡೆದು ಆಟೋರಿಕ್ಷಾದಲ್ಲಿ ಹತ್ತು ಇಲ್ಲವಾದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ, ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದಾನೆ. ಈ ಕುರಿತು ಪಾಲಕರು ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಕೂಡಲೇ ಎಚ್ಚೆತ್ತ ಪೊಲೀಸರು ಹಾವೇರಿ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಅವರನ್ನು ಹಿಡಿದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಪೋಕ್ಸೋ, ಅಪಹರಣ, ಮತಾಂತರಕ್ಕೆ ಯತ್ನ ಸೇರಿ ವಿವಿಧ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.