ಸುತ್ತಮುತ್ತ ಯಾರೂ ಇಲ್ಲ, ಎಫ್‌ಐಆರ್ ಮಾಡೋದಿಲ್ಲ…

FIR, Police, Officer, Complainant, Examination,
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಸುತ್ತಮುತ್ತ ಯಾರೂ ಇಲ್ಲ, ಎಫ್‌ಐಆರ್ ಮಾಡೋದಿಲ್ಲ…

ಪೊಲೀಸ್ ಅಧಿಕಾರಿಗಳು ಇನ್ನು ಹೀಗೆ ಅಂದುಕೊಳ್ಳುವಂತಿಲ್ಲ. ಬಂದ ದೂರುದಾರ ನಿಮ್ಮ ಪರೀಕ್ಷೆಗೆ ಬಂದ ಪರೀಕ್ಷಕನಾಗಿರಲೂ ಬಹುದು.

‘ಕಂಪ್ಲೆಂಟ್‌ನೆಂಟ್’ಗೆ ಆಯಾ ಠಾಣಾಧಿಕಾರಿ-ಸಿಬ್ಬಂದಿ ಸೂಕ್ತ ರೀತಿ ಸ್ಪಂದಿಸದಿದ್ದರೆ ಶಿಸ್ತು ಕ್ರಮವನ್ನು ಅಲ್ಲಗಳೆಯುವಂತಿಲ್ಲ.

ಸನ್ನಿವೇಶ- 1:
ಹಿರಿಯೂರಿನ ಠಾಣೆಯೊಂದಕ್ಕೆ ಹೋದ ವ್ಯಕ್ತಿ, ತುಮಕೂರಿನಿಂದ ಕಾರಿನಲ್ಲಿ ಬರುವಾಗ ಸುಲಿಗೆ ಆಗಿದೆ ಎಂದು ಹೇಳಿದ್ದಾರೆ.

ಪೊಲೀಸ್ ಸಿಬ್ಬಂದಿ ದೂರು ದಾಖಲಿಸದೆ, ಟೋಲ್‌ಗೇಟ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿ ತನ್ನಿ, ತುಮಕೂರಿನಲ್ಲಿ ದೂರು ಕೊಡಿ ಎಂದೆಲ್ಲ ಸತಾಯಿಸಿದ್ದಾರೆ. ಮಾರನೇ ದಿನ ತಪ್ಪಿತಸ್ಥರಿಗೆ ಎಸ್‌ಪಿ ಮೆಮೊ ನೀಡಿದ್ದಾರೆ.

ಸನ್ನಿವೇಶ- 2:
ಸೀಬಾರ ಬಳಿ ಬೈಕ್ ಅಡ್ಡಗಟ್ಟಿ 3-4 ಮಂದಿ ನನ್ನ ಮೇಲೆ ಹಲ್ಲೆ ಮಾಡಿ ಮೊಬೈಲ್, ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವ್ಯಕ್ತಿಯೊಬ್ಬರು ಹೇಳಿದರು.

ಅಲ್ಲಿದ್ದ ಅಧಿಕಾರಿಗಳು ಕೂಡಲೇ ಸ್ಪಂದಿಸಿ, ಸ್ಥಳ ಮಹಜರನ್ನೂ ನಡೆಸಿ, ಎಫ್‌ಐಆರ್ ದಾಖಲಿಸಲು ಮುಂದಾಗಿದ್ದರು.

ಆಗ ಎಸ್‌ಪಿ ಕೆ.ಪರಶುರಾಮ್ ನಿಜ ವಿಷಯ ತಿಳಿಸಿ, ಎಫ್‌ಐಆರ್ ದಾಖಲಿಸುವುದನ್ನು ತಡೆದು ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿದ್ದಾರೆ.

ನಾಗರಿಕ ಸ್ನೇಹಿಯಾಗುವತ್ತ ಕಾರ್ಯೋನ್ಮುಖ
ಪೊಲೀಸರ ವರ್ತನೆ ನಾಗರಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದ್ದು, ಈ ಕುರಿತು ಸಿಬ್ಬಂದಿಗೆ ಅರಿವು ಮೂಡಿಸುತ್ತಿದೆ.

ಇದಕ್ಕಾಗಿ ಇಲಾಖೆಯಲ್ಲಿ ಈಗಾಗಲೇ ಇರುವ ಕಾರ‌್ಯಕ್ರಮಗಳಿಗೆ ಹಿರಿಯ ಅಧಿಕಾರಿಗಳು ಚುರುಕು ನೀಡಿದ್ದಾರೆ.

ರಾಜ್ಯದ ಡಿಜಿ ಮತ್ತು ಇನ್ಸ್‌ಪೆಕ್ಟರ್ ಜನರಲ್ ಪೊಲೀಸ್ ಆಗಿ ಡಾ.ಅಲೋಕ್‌ಕುಮಾರ್ ನೇಮಕವಾದ ಬಳಿಕ ದೂರು ತೆಗೆದುಕೊಳ್ಳಲು ಸತಾಯಿಸುವ ಅಧಿಕಾರಿ, ಸಿಬ್ಬಂದಿಗೆ ಬಿಸಿ ಮುಟ್ಟತೊಡಗಿದೆ.

ಡಿಜಿ ನಿರ್ದೇಶನದ ಮೇರೆಗೆ ಕಳವು, ರಾಬರಿ ಇತ್ಯಾದಿ ಕಲ್ಪಿತ ದೂರು ಸಲ್ಲಿಕೆಯಾಗುತ್ತಿವೆ.

ಇದಕ್ಕೆ ಸೂಕ್ತವಾಗಿ ಸ್ಪಂದಿಸದೆ ಉಡಾಫೆ ವರ್ತನೆ ತೋರಿದರೆ ಠಾಣಾಧಿಕಾರಿ-ಸಿಬ್ಬಂದಿ ವಿರುದ್ಧ ಮೆಮೊ ಜಾರಿ, ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಉತ್ತಮ ಸ್ಪಂದನೆಗೆ ಪ್ರಶಂಸಾ ಪತ್ರವನ್ನೂ ನೀಡಲಾಗುತ್ತಿದೆ.

ತೆರೆದ ಮನೆ
ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಠಾಣೆಗೆ ಕರೆಸಿ ಪೊಲೀಸ್ ಕಾರ‌್ಯವೈಖರಿ ಪರಿಚಯಿಸಲಾಗುತ್ತದೆ.

ಅವಘಡ, ತುರ್ತು ಸಂದರ್ಭದಲ್ಲಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಠಾಣೆಗಳ ಸ್ವಚ್ಛತೆಗೂ ವಿಶೇಷ ಆದ್ಯತೆ ನೀಡಲಾಗುತ್ತಿದೆ.

ಅಧಿಕಾರಿ-ಸಿಬ್ಬಂದಿಯ ಶ್ರಮದಾನದ ಮೂಲಕ ಠಾಣೆ ಕಟ್ಟಡ, ಆವರಣದ ಸ್ವಚ್ಛತೆ, ಹಳೆ ಕಡತ, ಪೀಠೋಪಕರಣ ವಿಲೇವಾರಿಗೆ ಆದ್ಯತೆ ನೀಡಲಾಗುತ್ತಿದೆ.

ಏರಿಯಾ ಡಾಮಿನೇಷನ್
ಠಾಣಾ ವ್ಯಾಪ್ತಿಯ ಆಯ್ದ ಪ್ರದೇಶದಲ್ಲಿ ಪೊಲೀಸರು ಸಂಚರಿಸಿ ನಾಗರಿಕರಲ್ಲಿ ಸ್ಥೈರ್ಯ ತುಂಬುತ್ತಿದ್ದಾರೆ.

ಲೇಔಟ್‌ಗಳಲ್ಲಿ ಕುಡುಕರ ಅಡ್ಡೆಗೆ ಬ್ರೇಕ್ ಹಾಕಲು, ತ್ರಿಬಲ್ ರೈಡಿಂಗ್, ವ್ಹಿಲೀಂಗ್, ಚುಡಾಯಿಸುವಿಕೆ, ಕೆಪಾಸಿಟಿ ಮೀರಿ ಪ್ರಯಾಣಿಕರನ್ನು ಕರೆದೊಯ್ಯುವ, ಲಗೇಜ್ ಸಾಗಿಸುವ ವಾಹನಗಳ ಚಾಲಕರಿಗೆ ದಂಡ ವಿಧಿಸಲಾಗುತ್ತಿದೆ.

ಗುಡ್ ಮಾರ‌್ನಿಂಗ್, ಗುಡ್ ಇವನಿಂಗ್ ಇ-ಬೀಟ್‌ಗಳನ್ನು ಬಿಗಿಗೊಳಿಸಲಾಗುತ್ತಿದೆ.

ಸುಬಾಹು ಆ್ಯಪ್ ನೆರವಿನೊಂದಿಗೆ ಗಸ್ತು ಕರ್ತವ್ಯವನ್ನು ಪರಿಶೀಲಿಸಲಾಗುತ್ತಿದೆ.

ಅಲ್ಲಲ್ಲಿ ಅಳವಡಿಸಿರುವ ಕ್ಯೂಆರ್ ಕೋಡ್‌ನ್ನು ಸಿಬ್ಬಂದಿ ಮೊಬೈಲ್‌ನಲ್ಲಿ ಸ್ಕಾೃನ್ ಮಾಡಬೇಕಾಗುತ್ತದೆ.

ಡಿಜಿಪಿ ನಿರ್ದೇಶನದಂತೆ ಪೊಲೀಸ್ ಸೇವೆಯನ್ನು ಜನಸ್ನೇಹಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮೇ 20 ರಿಂದ ಇಲ್ಲಿಯವರೆಗೆ ಗಾಂಜಾ ಮತ್ತಿನಲ್ಲಿದ್ದ ಆರು ಜನರನ್ನು ಬಂಧಿಸಲಾಗಿದೆ. ಮಟ್ಕಾ ಕೇಸ್‌ನಲ್ಲಿ 10 ಜನರ ಅರೆಸ್ಟ್ ಮಾಡಲಾಗಿದೆ. 41 ಕ್ಕೂ ಹೆಚ್ಚು ಜೂಜಾಟ ಪ್ರಕರಣದಲ್ಲಿ 109 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 165 ರೌಡಿಗಳ ಮನೆ ತಪಾಸಣೆ ಆಗಿದೆ. 105 ತ್ರಿಬಲ್ ರೈಡಿಂಗ್ ಕೇಸು ದಾಖಲಿಸಲಾಗಿದೆ. ಎಲ್ಲ ಠಾಣೆ ಅಧಿಕಾರಿ ಸಿಬ್ಬಂದಿಯ ಬೀಟ್ ಬಿಗಿಗೊಳಿಸಲಾಗಿದೆ.ಕೆ.ಪರಶುರಾಮ್, ಎಸ್‌ಪಿ, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net