ಪ್ರತಿಭಟಿಸಿದವರಿಗೆ ಎಫ್‌ಐಆರ್ ಬಿಸಿ

Published on

ಟೋಲ್ ಸಂಗ್ರಹ ವಿರೋಧಿಸಿ ಸೋಮನಹಳ್ಳಿ ಬಳಿ ಹೋರಾಟದಲ್ಲಿ ಪಾಲ್ಗೊಂಡವರ ಮೇಲೆ ದೂರು

ಕನಕಪುರ : ಬೆಂಗಳೂರು-ಕನಕಪುರ ಹೆದ್ದಾರಿಯ ಸೋಮನಹಳ್ಳಿ ಗೇಟ್ ಬಳಿ ಟೋಲ್ ಸಂಗ್ರಹದ ವಿರುದ್ಧ ರಾಜ್ಯ ರೈತ ಹಿತ ರಕ್ಷಣಾ ಸಂಘ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಮೈಮೇಲೆ ಆಯಿಲ್ ಸುರಿದುಕೊಂಡು ಹೋರಾಟ ನಡೆಸಿದವರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಸೋಮನಹಳ್ಳಿ ಬಳಿ ಟೋಲ್ ಸಂಗ್ರಹ ವಿರೋಧಿಸಿ ರೈತರ ಹಾಗೂ ಸ್ಥಳೀಯರ ಹಿತ ಕಡೆಗಣಿಸಿ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಮೇ 21 ರಂದು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಈ ಸಂಬಂಧ ರಾಜ್ಯ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ನದೀಂ ಪಾಷ, ರಾಜ್ಯ ಸಲಹೆಗಾರ ಹೊಸದುರ್ಗ ಪ್ರಶಾಂತ್, ರೈತರಾದ ವೆಂಕಟೇಶ್, ಮಂಜುನಾಥ್, ಆರೋಗ್ಯಸ್ವಾಮಿ ಮತ್ತು ತಬ್ಸುಂ ಹಾಗೂ ಪವಿತ್ರಾ ಸೇರಿ 15 ಮಂದಿ ಹೋರಾಟಗಾರರ ಮೇಲೆ ರಾಮನಗರ ಜಿಲ್ಲಾ ಪೊಲೀಸ್ ಠಾಣಾ ಪ್ಯಾಪ್ತಿಯ ಕಗ್ಗಲಿಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹೋರಾಟ ಹತ್ತಿಕ್ಕುವ ಯತ್ನ

ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಅನಂತರಾಮ್, ರೈತರು ಹಾಗೂ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಬಡ ರೈತ, ಹೋರಾಟಗಾರರನ್ನು ಕ್ರಿಮಿನಲ್‌ಗಂತೆ ಪರಿಗಣಿಸಿ ಅವರ ಮೇಲೆ ದೂರು ದಾಖಲಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ವಕೀಲ ಚಂದ್ರಶೇಖರ್ ಜಿಲ್ಲಾಡಳಿತದ ವಿರುದ್ಧ ಕಿಡಿ ಕಾರಿದರು.

ಸೋಮನಹಳ್ಳಿ ಟೋಲ್‌ಬಳಿ ಏಕಾಏಕಿ ಸ್ಥಳೀಯ ಗ್ರಾಮಸ್ಥರ ಹಾಗೂ ರೈತರಿಗೆ ಯಾವುದೇ ವಿನಾಯಿತಿ ನೀಡದೆ ಏಕಾಏಕಿ ಟೋಲ್ ಪ್ರಾರಂಭ ಮಾಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಡಳಿತ ದರ್ಪದಿಂದ ದೂರು ದಾಖಲಿಸಿರುವ ಕ್ರಮ ಸರಿಯಲ್ಲ, ರಸ್ತೆ ವಿಸ್ತರಣೆಯಲ್ಲಿ ಜಮೀನು ಕಳೆದುಕೊಂಡ ಗ್ರಾಮಸ್ಥರು, ರೈತರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಇವರೇ ಹಣ ್ಡಕೊಟ್ಟು ಟೋಲ್‌ನಲ್ಲಿ ಓಡಾಡುವುದು ಯಾವ ನ್ಯಾಯ?, ಕೂಡಲೇ ಸರ್ಕಾರ ರೈತರ ಹಾಗೂ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣ ಹಿಂಪಡೆಯಬೇಕು, ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಗ್ರಾಮಸ್ಥರು ಒಳಗೂಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಅನಂತರಾಮ್, ರಾಮಲಿಂಗೇಗೌಡ ಸೇರಿ ಹಲವರು ಹಾಜರಿದ್ದರು.

ಸ್ಥಳೀಯ ಗ್ರಾಮಸ್ಥರ, ರೈತರ ಹಿತಾಸಕ್ತಿಯನ್ನು ಕಡೆಗಣನೆ ವಿರುದ್ಧ ಮಾಡುತ್ತಿರುವ ಹೋರಾಟವನ್ನು ಹಿಮ್ಮೆಟ್ಟಿಸಲು ನ್ಯಾಯ ಕೇಳುವುದೇ ಅಪರಾಧವಾಗಿದೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ, ಜೈಲಿಗೆ ಹೋಗಲೂ ಸಿದ್ಧ.. | ಪ್ರಶಾಂತ್ ಹೊಸದುರ್ಗ, ರೈತ ಹಿತರಕ್ಷಣಾ ಸಂಘದ ಸಲಹೆಗಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net