

ಕಲಬುರಗಿ : ರಾಜ್ಯಸಭೆ ವಿಪಕ್ಷ ನಾಯಕರು ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವರ್ಣದ ಕುರಿತು ಹಗುರವಾಗಿ ಅವಹೇಳನ ಮಾಡಿ ಟೀಕಿಸಿರುವ ಮಾಜಿ ಗೃಹ ಸಚಿವರು ಆಗಿರುವ ಬಿಜೆಪಿ ಶಾಸಕ ಅಗರ ಜ್ಞಾನೇಂದ್ರ ಅವರ ವಿರುದ್ಧ ಕಲಬುರಗಿಯಲ್ಲಿ ಎಫ್‌ಐಆರ್ ದಾಕಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರಾದ ರಾಜೀವ್ ಜಾನೆ ನೀಡಿದ ದೂರಿನಂತೆ ಇಲ್ಲಿನ ಅಶೋಕ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಂಡಿತ ಸಗರ ಅವರು ಪ್ರಕರಣವನ್ನು ಗುರುವಾರ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 504 ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಅಗರ ಜ್ಞಾನೇಂದ್ರ ಅವರು ಬಿಸಿಲಿನ ತಾಪಕ್ಕೆ ಅಲ್ಲಿನ (ಕಲಬುರಗಿ) ಜನ ಸುಟ್ಟು ಕರಕಲಾಗಿರುತ್ತಾರೆ. ಅದನ್ನು ಮಲ್ಲಿಕಾರ್ಜುನ ಖರ್ಗೆ ಅವರ ಸ್ಥಿತಿ ನೋಡಿದರೆ ಗೊತ್ತಾಗುತ್ತದೆ ಎಂದು ಬುಧವಾರ ಟೀಕೆ ಮಾಡಿದ್ದರು. ಖರ್ಗೆ ಅವರ ಮೈಬಣ್ಣದ ಬಗ್ಗೆ ಮಾತನಾಡಿ ನಿಂಧಿಸಿದ್ದಾರೆ ಎಂದು ದೂರಿದ್ದಾರೆ. ಜಾನೆ ನೀಡಿದ ದೂರಿನಂತೆ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿರುವ ಅಶೋಕ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.