ಎಫ್​ಐಆರ್​ನಲ್ಲಿ ನನ್ನ ಹೆಸರಿಲ್ಲ, ಜಾಮೀನು ಕೊಡಿ ಎಂದವನಿಗೆ ಹೈಕೋರ್ಟ್ ತರಾಟೆ

high court
Published on

ಬೆಂಗಳೂರು: ಪ್ರಥಮ ವರ್ತಮಾನ ವರದಿ (ಎಫ್​​ಐಆರ್​) ಎಂದರೆ ವಿಶ್ವಕೋಶ (ಎನ್​ಸೈಕ್ಲೋಪಿಡಿಯಾ) ಅಲ್ಲ. ಅಪರಾಧಕ್ಕೆ ಸಂಬಂಧಿಸಿದ ಪ್ರತಿ ವಿಚಾರವನ್ನೂ ಅದರಲ್ಲಿ ವಿವರಿಸಬೇಕೆಂಬ ನಿಯಮವಿಲ್ಲ ಎಂದಿರುವ ಹೈಕೋರ್ಟ್​, ಎಫ್​ಐಆರ್​ನಲ್ಲಿ ತನ್ನ ಹೆಸರಿಲ್ಲದ ಕಾರಣ ಜಾಮೀನು ನೀಡಬೇಕೆಂದು ಕೋರಿ ಕೊಲೆ ಆರೋಪಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಹೆಣ್ಣೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಅರ್ಜುನ್​ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್​ ಹರೀಶ್​ ಕುಮಾರ್​ ಅವರಿದ್ದ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದ ಮಂಡಿಸಿ, ಮೃತನ ಸಹೋದರಿಯ ಹೇಳಿಕೆ ಆಧರಿಸಿ ಎಫ್​ಐಆರ್​ ದಾಖಲಿಸಲಾಗಿದೆ. ಎಫ್​ಐಆರ್​ನಲ್ಲಿ ಅರ್ಜಿದಾರರ ಹೆಸರು ಉಲ್ಲೇಖಿಸಲಾಗಿಲ್ಲ. ಪ್ರತ್ಯಕ್ಷದರ್ಶಿಗಳು ಎನ್ನಲಾಗಿರುವ ವ್ಯಕ್ತಿಗಳು ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅರ್ಜಿದಾರರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಾಧಾರವಿಲ್ಲ. ಆದ್ದರಿಂದ ಜಾಮೀನು ನೀಡಬೇಕೆಂದು ಕೋರಿದ್ದರು.

ಈ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್​, ಎಫ್​ಐಆರ್​ನಲ್ಲಿ ಅಪರಾಧದ ಪ್ರತಿಯೊಂದು ವಿವರವೂ ಇರಬೇಕು ಎಂಬ ನಿಯಮವಿಲ್ಲ. ಅದು ಎನ್​ಸೈಕ್ಲೋಪಿಡಿಯಾ ಅಲ್ಲ. ಕೃತ್ಯದ ಮಾಹಿತಿ ಇದ್ದರೆ ಸಾಕು. ಪ್ರತ್ಯಕ್ಷ್ಯದರ್ಶಿಗಳು ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದಾದರೆ, ಅವರನ್ನು ನ್ಯಾಯಾಲಯದ ವಿಚಾರಣೆ ವೇಳೆ ಪಾಟೀ ಸವಾಲಿಗೆ ಒಳಪಡಿಸಲು ಅವಕಾಶವಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net