

ಬೆಂಗಳೂರು: ಏನೂ ಅರಿಯದ ಎರಡು ವರ್ಷದ ಮಗು ಆಟವಾಡುತ್ತಲೇ ದುರ್ಮರಣಕ್ಕೀಡಾದ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಪಾಳ್ಯದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದ ವಿನೋದ್ ಕುಮಾರ್ (2) ಮೃತ ದುರ್ದೈವಿ. ಉಮೇಶ್ ಎಂಬುವವರು ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿಸುತ್ತಿದ್ದರು. ಕೊಪ್ಪಳ ಮೂಲದ ಅಂಬರೀಷ್ ದಂಪತಿ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಕೆಂಗೇರಿ ಸಮೀಪದ ಕೋಡಿಪಾಳ್ಯದಲ್ಲಿ ಶೆಡ್ನಲ್ಲಿ ನೆಲೆಸಿದ್ದರು. ಅಂಬರೀಷ್ ದಂಪತಿಗೆ ಒಬ್ಬನೇ ಪುತ್ರ ವಿನೋದ್. ಬಿಜಿಎಸ್ ಆಸ್ಪತ್ರೆಯಲ್ಲಿ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿಕೆಲಸ ಮಾಡುತ್ತಿದ್ದು, ತಾಯಿ ಕೂಲಿ ಕೆಲಸ ಮಾಡುತ್ತಿದ್ದಾರೆ.
ಲಿಫ್ಟ್ ಅಳವಡಿಸಲು 6 ಅಡಿ ಗುಂಡಿ ತೋಡಿದ್ದರು. ಇತ್ತೀಚೆಗೆ ಸುರಿದ ಮಳೆ ಇಂದಾಗಿ ನೀರು ತುಂಬಿಕೊಂಡಿತ್ತು. ಯಾರೂ ಹೋಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡ ಮಾಲೀಕ ಮತ್ತು ಗುತ್ತಿಗೆದಾರನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.