

ಹೊಸಕೋಟೆ: ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ 15 ಜನರ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಗರದ ವಿವಿಧ ವಾರ್ಡ್ಗಳಲ್ಲಿ ಶನಿವಾರ ಸಚಿವ ಎಂಟಿಬಿ ನಾಗರಾಜ್ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿಪೂಜೆ ವೇಳೆ ಶಿಷ್ಟಾಚಾರ ಉಲ್ಲಂಘನೆ ಆರೋಪ ಮಾಡಿದ್ದ ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರು ಗದ್ದಲ ನಡೆಸಿದ್ದರು. ಈ ವೇಳೆ ಪೊಲೀಸರು ಮತ್ತು ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು. ಪೊಲೀಸರು ಹಾಗೂ ಶಾಸಕ ಶರತ್ ಬೆಂಬಲಿಗರ ನಡುವೇ ಹೈಡ್ರಾಮಾ ನಡೆದಿತ್ತು. ಶಾಸಕರ ಬೆಂಬಲಿಗರು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ, ಬಳಿಕ ರಾಷ್ಟ್ರೀಯ ಹೆದ್ದಾರಿ-75ನ್ನು ಕೆಲ ಕಾಲ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿರಿ ನಿವೃತ್ತ ಉಪನ್ಯಾಸನ ಪತ್ನಿ, ಇಬ್ಬರು ಮಕ್ಕಳು ನಾಲೆಗೆ ಹಾರಿ ಆತ್ಮಹತ್ಯೆ! ಸಾವಿಗೂ ಮುನ್ನ ನಡೆದಿತ್ತು ವಾಕ್ಸಮರ
ಈ ಹಿನ್ನೆಲೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದ ಹಿನ್ನೆಲೆಯಲ್ಲಿ ಶಾಸಕರು ಸೇರಿದಂತೆ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸರ ಅಮಾನತಿಗೆ ಪಟ್ಟು: ತಾಲೂಕಿನಲ್ಲಿ ನಡೆಯುವ ಸರ್ಕಾರಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಶಾಸಕರ ಉಪಸ್ಥಿತಿ ಇಲ್ಲದೆ ಶಿಷ್ಟಾಚಾರ ಬದಿಗೊತ್ತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ಬಗ್ಗೆ ಪಕ್ಷದ ನಾಯಕರು ಅಧಿಕಾರಿಗಳನ್ನು ಪ್ರಶ್ನಿಸಲು ಹೋದಾಗ ಪೊಲೀಸರು ದರ್ಪ ತೋರಿದ್ದಾರೆ. ಇದು ಸಚಿವರನ್ನು ಮೆಚ್ಚಿಸಲೋ ಅಥವಾ ಅವರ ಆದೇಶದ ಮೇರೆಗೆ ಮಾಡಿದ್ದಾರೋ ಪೊಲೀಸರೇ ತಿಳಿಸಬೇಕು ಎಂದು ಕಿಡಿಕಾರಿರುವ ಶಾಸಕ ಶರತ್, ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ವಿಧಾನಸಭೆ ಅಧ್ಯಕ್ಷರಿಗೆ ಪತ್ರ ಬರೆದು ಕಲಾಪದಲ್ಲಿ ಈ ಬಗ್ಗೆ ಪ್ರಶ್ನಿಸಲಾಗುವುದು. ಪ್ರಕರಣಕ್ಕೆ ಕಾರಣರಾದ ಪೊಲೀಸರನ್ನು ಅಮಾನತುಗೊಳಿಸುವಂತೆ ಒತ್ತಾಯಿಸುವೆ. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಶರತ್ ಬಚ್ಚೇಗೌಡ ಎಚ್ಚರಿಸಿದ್ದಾರೆ.